Asianet Suvarna News Asianet Suvarna News

ಸೆಮಿನಾರಿಗೆ ಹೋಗದಿದ್ರೆ ವೈದ್ಯರ ಲೈಸೆನ್ಸ್ ನವೀಕರಣವಿಲ್ಲ

ವೈದ್ಯಲೋಕದಲ್ಲಿನ ಬದಲಾವಣೆಯ ಜ್ಞಾನ ಕಡ್ಡಾಯ | 5 ವರ್ಷಕ್ಕೊಮ್ಮೆ 30 ಗಂಟೆಗಳ ಸೆಮಿನಾರ್‌ ಹಾಜರಿ ತೋರಿಸಬೇಕು

doctors should attend seminar for license renewal says state govt

ವಿಧಾನಪರಿಷತ್(ಮಾ. 25): ರಾಜ್ಯದ ವೈದ್ಯರು ವೈದ್ಯಕೀಯ ವಿಜ್ಞಾನದಲ್ಲಾಗುತ್ತಿರುವ ಬದಲಾವಣೆ ಹಾಗೂ ಸಂಶೋಧನೆಗಳ ಕುರಿತು ಜ್ಞಾನ ಹೊಂದುವುದನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ವೈದ್ಯಕೀಯ ನೋಂದಣಿ ವಿಧೇಯಕಕ್ಕೆ ಕೆಲವೊಂದು ತಿದ್ದುಪಡಿಗಳನ್ನು ಸರ್ಕಾರ ಮಾಡಿದೆ. ಈ ತಿದ್ದುಪಡಿ ವಿಧೇಯಕವು ಗುರುವಾರ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದು, ನಿನ್ನೆ ವಿಧಾನಪರಿಷತ್‌'ನಲ್ಲಿ ಸುದೀರ್ಘ ಚರ್ಚೆ ಬಳಿಕ ಅಂಗೀಕಾರಗೊಂಡಿತು. 

ರಾಜ್ಯದಲ್ಲಿರುವ 1,16,000 ವೈದ್ಯರು ಇನ್ನು ಮುಂದೆ ನೋಂದಣಿ ನವೀಕರಣಕ್ಕಾಗಿ ಕೆಲವೊಂದು ಹೊಸ ಅಗತ್ಯತೆಗಳನ್ನು ಪೂರೈಸುವುದು ಕಡ್ಡಾಯವಾಗಿದ್ದು, ಪ್ರತಿ ಐದು ವರ್ಷಕ್ಕೊಮ್ಮೆ ನೋಂದಣಿ ನವೀಕರಣಕ್ಕೂ ಮುನ್ನ 30 ಗಂಟೆಗಳ ಕಾಲ ವೈದ್ಯಕೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿರಬೇಕು. ಈ ಭಾಗವಹಿಸುವಿಕೆಯ ಹಾಜರಾತಿಯನ್ನೂ ನೋಂದಣಿ ವೇಳೆ ನೀಡುವುದು ಕಡ್ಡಾಯವಾಗಿದ್ದು, ಹಾಜರಾತಿಯನ್ನು ಆಧಾರ್‌ಗೆ ಸಂಯೋಜಿಸುವ ಅಥವಾ ಭಾಗವಹಿಸುವಿಕೆ ಹಾಜರಾತಿಯನ್ನು ಬಯೋಮೆಟ್ರಿಕ್‌ ಮೂಲಕ ದಾಖಲಿಸುವ ಸದಸ್ಯರ ಸಲಹೆಯನ್ನೂ ಪರಿಗಣಿಸಲಾಗುವುದು. ಒಂದೊಮ್ಮೆ ನೋಂದಣಿ ವೇಳೆ ಈ ದಾಖಲೆಯನ್ನು ಒದಗಿಸದೇ ಹೋದಲ್ಲಿ ವೈದ್ಯರ ನೋಂದಣಿ ನವೀಕರಣಗೊಳ್ಳುವುದಿಲ್ಲ. ಮಾತ್ರವಲ್ಲ ಅವರು ಮುಂದೆ ಚಿಕಿತ್ಸೆ ನೀಡುವ (ಪ್ರಾಕ್ಟೀಸ್‌) ಅರ್ಹತೆಯನ್ನೂ ಕಳೆದುಕೊಳ್ಳಲಿದ್ದಾರೆ. 

ತಿದ್ದುಪಡಿ ಮಸೂದೆ ಮಂಡಿಸಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌, ವೈದ್ಯರು ಸದಾ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳುತ್ತಲೇ ಇರಬೇಕು. ಹೊಸ ಹೊಸ ಆವಿಷ್ಕಾರಗಳು ಚಿಕಿತ್ಸಾಪದ್ಧತಿಗಳ ಕುರಿತು ಅವರಿಗೆ ಅರಿವು ಮೂಡಬೇಕು. ಈ ನಿಟ್ಟಿನಲ್ಲಿ ಮುಂದುವರಿಕೆ ವೈದ್ಯಕೀಯ ಶಿಕ್ಷಣ (ಕಂಟಿನ್ಯೂಡ್‌ ಮೆಡಿಕಲ್‌ ಎಜುಕೇಶನ್‌-ಸಿಎಂಇ) ಕಾರ್ಯಕ್ರಮಗಳಲ್ಲಿ ವೈದ್ಯರು ಪಾಲ್ಗೊಳ್ಳಬೇಕು. ರಾಜ್ಯದ ಕೇಂದ್ರ ಸ್ಥಳದಲ್ಲಿ ಅಥವಾ ಪ್ರಾದೇಶಿಕ ಸ್ಥಳದಲ್ಲಿ ಜಿಲ್ಲಾ ಕೇಂದ್ರ ಅಥವಾ ಬೋಧನಾ ಆಸ್ಪತ್ರೆ/ವೈದ್ಯಕೀಯ ಕಾಲೇಜುಗಳಲ್ಲಿ ನಡೆಯುವ ವಿಚಾರಸಂಕಿರಣ ಗಳಲ್ಲಿ ವೈದ್ಯರು ಪಾಲ್ಗೊಳ್ಳಬೇಕು. ಕರ್ನಾಟಕ ವೈದ್ಯಕೀಯ ಪರಿಷತ್ತು ನಡೆಸುವ ಅಥವಾ ವೈದ್ಯಕೀಯ ಪರಿಷತ್ತು ಅನುಮೋದಿಸ ಬಹುದಾದ ವೈದ್ಯಕೀಯ ಸಮ್ಮೇಳನಗಳು/ ವಿಚಾರಸಂಕಿರಣ/ ಕಾರ್ಯಾಗಾರಗಳಲ್ಲಿ ವೈದ್ಯರು ಭಾಗವಹಿಸಬೇಕು ಎಂದರು. 

ಸೋಮವಾರ ಚರ್ಚೆ ಬಳಿಕ ಈ ತಿದ್ದುಪಡಿ ಮಸೂದೆ ಅಂಗೀಕಾರ ಮಾಡೋಣವೆಂದು ಕೆಲ ವಿಪಕ್ಷ ಸದಸ್ಯರು ಹೇಳಿದರು. ಸೋಮವಾರವೂ ಅಂಗೀಕಾರ ಮಾಡಬಹುದು, ತುರ್ತು ಅಗತ್ಯವಿಲ್ಲ ಎಂದು ಶರಣಪ್ರಕಾಶ್‌ ಪಾಟೀಲ್‌ ಒಪ್ಪಿಕೊಂಡರು. ಆದರೆ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಸದಸ್ಯರಿಗೆ ಚರ್ಚೆಗೆ ಅವಕಾಶ ಮಾಡಿಕೊಟ್ಟದ್ದರಿಂದ ವಿವಿಧ ಸದಸ್ಯರು ಅಭಿಪ್ರಾಯ ಮಂಡಿಸಿದರು. 

ಕಾಂಗ್ರೆಸ್‌'ನ ಎಸ್‌.ಆರ್‌.ಪಾಟೀಲ್‌, ಐವನ್‌ ಡಿಸೋಜಾ ಮೊದಲಾದವರು ತಿದ್ದುಪಡಿಯನ್ನು ಬೆಂಬಲಿಸಿ ಮಾತನಾಡಿದರು.ತಿದ್ದುಪಡಿಯಲ್ಲಿ ಯಾವುದೇ ಆಕ್ಷೇಪಾರ್ಹವಾದ ಅಥವಾ ವಿವಾದಾತ್ಮಕವಾದ ಅಂಶಗಳಿಲ್ಲ. ಇದನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಮಂಡಿಸಲಾಗಿದೆ ಎಂದರು. ಆದರೆ ಬಿಜೆಪಿಯ ಗಣೇಶ್‌ ಕಾರ್ಣಿಕ್‌ ಕೆಲವೊಂದು ವಿಚಾರಗಳಲ್ಲಿ ಸ್ಪಷ್ಟೀಕರಣ ಬಯಸಿದರು. ವಯೋವೃದ್ಧ ವೈದ್ಯರು, ಗ್ರಾಮೀಣ ಪ್ರದೇಶಗಳ ವೈದ್ಯರು ಹೇಗೆ ವಿಚಾರಸಂಕಿರಣಗಳಲ್ಲಿ ಭಾಗವಹಿಸಲು ಸಾಧ್ಯ. ಅವರು ತಮ್ಮ ಕ್ಲಿನಿಕ್‌ಗಳನ್ನು ಮುಚ್ಚಿ ವಿಚಾರಸಂಕಿರಣದಲ್ಲಿ ಕೂಡಬೇಕೆ. ವಿಚಾರಸಂಕಿರಣಗಳು ಇಷ್ಟೇ ನಡೆಯುತ್ತವೆ ಎಂದು ಖಾತರಿ ನೀಡುವವರು ಯಾರು ಎಂದು ಪ್ರಶ್ನಿಸಿದರು. ಜೆಡಿಎಸ್‌ನ ಶ್ರೀಕಂಠೇಗೌಡ ಕೂಡ ಕಾರ್ಣಿಕ್‌ ವಾದಕ್ಕೆ ದನಿಗೂಡಿಸಿದರು. 

ವೈದ್ಯರಾಗಿ ಮಂತ್ರಿಗಳಾದವರು, ಶಾಸಕರಾದವರು ಏನು ಮಾಡಬೇಕೆಂದು ಪ್ರಶ್ನಿಸಿದ ಕಾರ್ಣಿಕ್‌, ನೀವೇ ಡಾಕ್ಟರ್‌ ಪದವಿ ಕಳೆದುಕೊಳ್ಳುತ್ತೀರಾ ಎಂದು ಸಚಿವ ಶರಣ್‌ಪ್ರಕಾಶ್‌ ಪಾಟೀಲ್‌ರಿಗೆ ಎಚ್ಚರಿಸಿದರು. ಸ್ಪಷ್ಟೀಕರಣ ನೀಡಿದ ಸಚಿವ ಶರಣಪ್ರಕಾಶ್‌ ಪಾಟೀಲ್‌, ಪ್ರಾಕ್ಟೀಸ್‌ ಮಾಡುತ್ತಿರುವ ವೈದ್ಯರುಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ. 65 ವರ್ಷ ದಾಟಿದ ವೈದ್ಯರುಗಳಿಗೆ, ರಾಜಕಾರಣ ಮೊದಲಾಗಿ ಬೇರೆ ಬೇರೆ ವಲಯಗಳಲ್ಲಿರುವವರಿಗೆ ವಿನಾಯ್ತಿ ನೀಡಲಾಗುವುದು ಎಂದರು. ವೈದ್ಯನಾಗಿ ವೈದ್ಯರ ಹಿತ ಕಾಯಲು ಈ ತಿದ್ದುಪಡಿ ಮಾಡುತ್ತಿಲ್ಲ. ಜನಸಾಮಾನ್ಯರಿಗೆ ಉತ್ತಮ ಗುಣಮಟ್ಟದ ಮತ್ತು ಉನ್ನತೀಕರಣಗೊಂಡ ಸೇವೆ ಸಿಗಬೇಕೆಂಬ ಆಶಯದೊಂದಿಗೆ ತಿದ್ದುಪಡಿ ಮಂಡಿಸಿರುವುದಾಗಿ ಹೇಳಿದರು. 

ಪಕ್ಷೇತರ ಬಸವರಾಜ ಪಾಟೀಲ್‌ ಯತ್ನಾಳ್‌, ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ, ರಿಜ್ವಾನ್‌ ಅರ್ಷದ್‌, ಪ್ರಸನ್ನಕುಮಾರ್‌, ವಿ.ಎಸ್‌.ಉಗ್ರಪ್ಪ ಚರ್ಚೆಯಲ್ಲಿ ಪಾಲ್ಗೊಂಡರು. ಬಿಜೆಪಿಯ ಸದಸ್ಯರು ಕೆಲವೊಂದು ಆಕ್ಷೇಪಣೆಗಳೊಂದಿಗೆ ತಿದ್ದುಪಡಿಗೆ ಬೆಂಬಲ ವ್ಯಕ್ತಪಡಿಸಿದರೆ ಕೆ.ಬಿ.ಶಾಣಪ್ಪ, ಮಹಾಂತೇಶ ಕವಟಗಿಮಠ ತಿದ್ದುಪಡಿಯನ್ನು ಬೇಷರತ್‌ ಬೆಂಬಲಿಸಿ ಮಾತನಾಡಿದ್ದು ವಿಶೇಷವಾಗಿತ್ತು.

ಕನ್ನಡಪ್ರಭ ವಾರ್ತೆ
epaper.kannadaprabha.in

Follow Us:
Download App:
  • android
  • ios