Asianet Suvarna News Asianet Suvarna News

ಪುಸ್ತಕ ಪ್ರೇಮಕ್ಕಾಗಿ ಜೀವನ ಮುಡುಪಿಟ್ಟ ಅಂಕೇಗೌಡ : ಅಸಾಮಾನ್ಯ ಕನ್ನಡಿಗ

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿದೆ ಪುಸ್ತಕ ಮನೆ. ಸಕ್ಕರೆ ಕಾರ್ಖಾನೆಯಲ್ಲಿದ್ದುಕೊಂಡೇ ಪುಸ್ತಕ ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡಿದ್ದ ಅಂಕೇಗೌಡರು ಸಂಗ್ರಹಿಸಿರುವ ಅಪರೂಪದ ಗ್ರಂಥಾಲಯ ಇದು. ಇಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಪುಸ್ತಕಗಳಿವೆ. ಇಲ್ಲಿ ಯಾವುದೇ ಶುಲ್ಕ ಸಂಗ್ರಹಿಸುವುದಿಲ್ಲ.

Books lover Anke Gowda

ಬೆಂಗಳೂರು ವಿಪರೀತ ಓದಿನ ಹಸಿವು. ಆದರೆ, ಬಡತನ. ಮನೆಯ ಬಡತನದಿಂದಾಗಿ ಓದಲು ಪುಸ್ತಕ ಕೊಳ್ಳುವ ಶಕ್ತಿ ಇರಲಿಲ್ಲ. ಆದ್ದರಿಂದ ಹೆಚ್ಚಿನ ಓದು ಸಾಧ್ಯವಾಗಲಿಲ್ಲ. ಈ ನಿರಾಶೆಯೇ ಒಬ್ಬ ವ್ಯಕ್ತಿಯನ್ನು ಅತ್ಯಂತ ಗಟ್ಟಿ ನಿರ್ಧಾರ ಕೈಗೊಳ್ಳಲು ಪ್ರೇರೇಪಿಸಿ ಈಗ ಇಡೀ ದೇಶದಲ್ಲೇ ಎಲ್ಲೂ ಇರದ ಗ್ರಾಮೀಣ ಗ್ರಂಥಾಲಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. ಈ ಗ್ರಾಮೀಣ ಗ್ರಂಥಾಲಯಕ್ಕಾಗಿ ತಮ್ಮೆಲ್ಲ ಆಸ್ತಿಪಾಸ್ತಿ ಮಾರಿದ ಮಹಾವ್ಯಕ್ತಿ ಅಂಕೇಗೌಡರು.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿದೆ ಪುಸ್ತಕ ಮನೆ. ಸಕ್ಕರೆ ಕಾರ್ಖಾನೆಯಲ್ಲಿದ್ದುಕೊಂಡೇ ಪುಸ್ತಕ ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡಿದ್ದ ಅಂಕೇಗೌಡರು ಸಂಗ್ರಹಿಸಿರುವ ಅಪರೂಪದ ಗ್ರಂಥಾಲಯ ಇದು. ಇಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಪುಸ್ತಕಗಳಿವೆ. ಇಲ್ಲಿ ಯಾವುದೇ ಶುಲ್ಕ ಸಂಗ್ರಹಿಸುವುದಿಲ್ಲ. ಯಾವ ಪುಸ್ತಕವನ್ನು ಯಾರು ಬೇಕಾದರೂ ಬಂದು ಓದಿಕೊಂಡು ಹೋಗಬಹುದು. ಅಂಕೇಗೌಡರಿಗೆ ಪುಸ್ತಕ ಖರೀದಿಸದಿದ್ದರೆ ಸಮಾಧಾನವಾಗುವುದಿಲ್ಲ. ನಿತ್ಯ ಪುಸ್ತಕ ಮುಟ್ಟದಿದ್ದರೆ ದೇವರನ್ನು ಧ್ಯಾನಿಸಲಿಲ್ಲ ಎನ್ನುವ ಪಶ್ಚಾತ್ತಾಪದ ಭೀತಿ. ಪುಸ್ತಕಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಎಷ್ಟು ದೂರ ಬೇಕಾದರೂ ಕಾಲು ಸವೆಸುತ್ತಾರೆ.

ಅಂಕೇಗೌಡರ ಪುಸ್ತಕ ಪ್ರೀತಿಗೆ ಅವರ ನೆಚ್ಚಿನ ಮಡದಿ ವಿಜಯಲಕ್ಷ್ಮಿ ಸಹ ಸಾಥ್ ಕೊಟ್ಟಿದ್ದು ಇನ್ನಷ್ಟು ಸಹಕಾರಿ ಆಯಿತು. ಪತ್ನಿ ಹಬ್ಬ ಹರಿದಿನಕ್ಕೆ ಹೊಸ ಬಟ್ಟೆ ತರುವ ಬದಲು ಪುಸ್ತಕ ತಂದಾಗಲೂ ವಿಜಯಲಕ್ಷ್ಮಿಯವರು ಬೇಸರ ಮಾಡಿಕೊಳ್ಳುತ್ತಿರಲಿಲ್ಲ. ಮನೆಗೆ ದಿನಸಿ ತರಲು ಹೋಗಿ, ವಾಪಸ್ ಬರುವಾಗ ಬ್ಯಾಗ್ ತುಂಬಾ ಪುಸ್ತಕ ತಂದುಬಿಡುತ್ತಿದ್ದರು. ಆಗೆಲ್ಲಾ ಬೇಸರಿಸಿಕೊಳ್ಳದೇ ಸಾಥ್ ಕೊಟ್ಟಿದ್ದಾರೆ.

ಸೈಟ್ ಮಾರಾಟ

ಅಂಕೇಗೌಡರ ಪುಸ್ತಕ ಸಂಗ್ರಹ ಹೆಚ್ಚುತ್ತಿದ್ದಂತೆಯೇ ಅದನ್ನೆಲ್ಲ ಇಡಲು ಮನೆಯ ಜಾಗ ಸಾಲುತ್ತಿರಲಿಲ್ಲ. ಆಗ ಊರಿನಲ್ಲಿದ್ದ ತಮ್ಮ ಸ್ವಂತ ನಿವೇಶನ ಮಾರಿ ಬೃಹತ್ ಗ್ರಂಥಾಲಯ ಕಟ್ಟಿದರು. ಮೈಸೂರಿನ ಸೈಟ್ ಮಾರಿ ಇಡೀ ಗ್ರಂಥಾಲಯವನ್ನು ಸುಸಜ್ಜಿತಗೊಳಿಸಿದರು. ದೊಡ್ಡ ಜಾಗದಲ್ಲಿ ದೊಡ್ಡ ಲೈಬ್ರರಿ ತಲೆ ಎತ್ತಿ ನಿಂತಿತು. ಹೆಚ್ಚೆಚ್ಚು ವಿದ್ಯಾಥರ್ಿಗಳು, ಸಾರ್ವಜನಿಕರಿಗೆ ಲೈಬ್ರರಿಗೆ ಬರಲು ಅನುಕೂಲ ಆಯಿತು. ಇಲ್ಲಿ ರಾಮಾಯಣದ ಬಗ್ಗೆ 500ಕ್ಕೂ ಹೆಚ್ಚು ಲೇಖಕರ ಪುಸ್ತಕಗಳಿವೆ. ಗಾಂಧೀಜಿ ಬಗ್ಗೆ 2500 ಬಗೆಯ ಪುಸ್ತಕ, ಭಗವದ್ಗೀತೆಗೆ ಸಂಬಂಧಿಸಿದಂತೆ 3 ಸಾವಿರಕ್ಕೂ ಹೆಚ್ಚು ಗ್ರಂಥ, ಕಲೆ ಸಾಹಿತ್ಯ, ವಿಜ್ಞಾನ-ತಂತ್ರಜ್ಞಾನ ಹೀಗೆ ಎಲ್ಲ ಪ್ರಕಾರಗಳ ಪುಸ್ತಕಗಳು ಇಲ್ಲಿ ಲಭ್ಯ.

ಇಬ್ಬರಿಂದಲೇ ನಿರ್ವಹಣೆ:

ಸಾಮಾನ್ಯವಾಗಿ ಲೈಬ್ರರಿ ಎಂದಾಕ್ಷಣ ನೋಡಿಕೊಳ್ಳಲು ಜನ ಬೇಕು. ಅದರಲ್ಲೂ 10 ಲಕ್ಷ ಪುಸ್ತಕಗಳ ಗ್ರಂಥಾಲಯ ಎಂದರೆ, ಅದನ್ನು ನಿರ್ವಹಿಸಲು ಹತ್ತಿಪ್ಪತ್ತು ಕೆಲಸಗಾರರು ಬೇಕು. ಆದರೆ, ಅಂಕೇಗೌಡರು ಮತ್ತವರ ಪತ್ನಿಯ ಪುಸ್ತಕ ಪ್ರೀತಿ ಅದೆಷ್ಟು ಅಗಾಧವಾಗಿದೆ ಎಂದರೆ, ಇಡೀ ಲೈಬ್ರರಿಯನ್ನು ಇವರಿಬ್ಬರೇ ಒಪ್ಪ ಓರಣ ಮಾಡುತ್ತಾರೆ. ತಾವೇ ನಿಂತು ಪುಸ್ತಕಗಳನ್ನು ಜೋಡಿಸುವುದು, ಎತ್ತಿಡುವ ಕೆಲಸ ಮಾಡುತ್ತಾರೆ. ಅಂಕೇಗೌಡರ ಪುಸ್ತಕ ಪ್ರೇಮಕ್ಕೆ ಅನೇಕ ಪ್ರಶಸ್ತಿಗಳೂ ಒಲಿದಿವೆ. ಎಲ್ಲಕ್ಕಿಂತ ಹೆಚ್ಚಾಗಿ ಇತ್ತೀಚೆಗೆ ಅಂಕೇಗೌಡರ ಪುಸ್ತಕ ಮನೆ ಲಿಮ್ಕಾ ದಾಖಲೆಗಳ ಪುಸ್ತಕ ಸೇರಿದೆ. ಗ್ರಾಮೀಣ ಪ್ರದೇಶದ ಭವಿಷ್ಯದ ಮಕ್ಕಳಿಗೆ ಓದಲು ಎಲ್ಲ ಬಗೆಯ ಪುಸ್ತಕಗಳು ಒಂದೇ ಕಡೆ ಸಿಗಬೇಕೆಂದು ಶ್ರಮವಹಿಸಿರುವ ಅಂಕೇಗೌಡರು ನಿಜವಾದ ಜ್ಞಾನದಾಸೋಹಿ.

Follow Us:
Download App:
  • android
  • ios