Asianet Suvarna News Asianet Suvarna News

ಕೋಲಾರದ ಜಲಕ್ರಾಂತಿಕಾರ ಸೋಮಶೇಖರ ರೆಡ್ಡಿ: ಅಸಾಮಾನ್ಯ ಕನ್ನಡಿಗ

ಬರಪೀಡಿತವಾಗಿದ್ದ ಈ ಹಳ್ಳಿಗಳ ಜನ ಒಗ್ಗಟ್ಟಾಗಿ ನೀರು ನಿಲ್ಲಿಸಿ ಬಳಸಿಕೊಳ್ಳುವ ಸಂಕಲ್ಪ ಮಾಡಿದರು. ಅದಕ್ಕೆ ಬೇಕಾದಷ್ಟು ಹಣ ಇರಲಿಲ್ಲ. ಆಗ ನೆರವಿಗೆ ಧಾವಿಸಿದ್ದು, ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಸೋಮಶೇಖರ ರೆಡ್ಡಿ.

asamanya kannadiga somashekhara reddy of kolar

ಕೋಲಾರ ಎಂದಾಕ್ಷಣ ಭೀಕರ ಬರದ ಚಿತ್ರ ಕಣ್ಣ ಮುಂದೆ ಬಂದು ಬಿಡುತ್ತದೆ. ನೀರಿಗಾಗಿ ಸಾವಿರಾರು ಬೋರ್ವೆಲ್ಗಳನ್ನು ಕೊರೆದು ಆ ಭಾಗದ ಭೂಮಿಯಲ್ಲೆಲ್ಲಾ ಬರೀ ಕೊಳವೆಗಳೇ ತುಂಬಿವೆ. ಇಲ್ಲಿ ಮಳೆಯೂ ಸರಿಯಾಗಿ ಬರುವುದಿಲ್ಲ. ಬಂದ ನೀರೂ ನಿಲ್ಲುವುದಿಲ್ಲ. ಸಿಕ್ಕಾಪಟ್ಟೆ ಬೋರ್ವೆಲ್ ಕೊರೆದಿದ್ದರಿಂದ ಅಂತರ್ಜಲವೂ ಇಲ್ಲ.

ಹೀಗೆ, ನೀರಿಲ್ಲ, ನೀರಿಲ್ಲ ಎನ್ನುವ ಕೋಲಾರ ಜಿಲ್ಲೆಯಲ್ಲಿ ಗ್ರಾಮಸ್ಥರ ಸಾಮೂಹಿಕ ಪ್ರಯತ್ನದಿಂದಾಗಿ ಎಲ್ಲೆಡೆ ಅಚ್ಚ ಹಸಿರಿನ ನೂರಾರು ಎಕರೆ ಪ್ರದೇಶ ತಲೆ ಎತ್ತಿ ನಿಂತಿದೆ ಎಂದರೆ ಆಶ್ಚರ್ಯ ಆಗುತ್ತದೆ ಅಲ್ಲವೇ? ಕೋಲಾರದ ಶ್ರೀನಿವಾಸಪುರ ತಾಲೂಕಿನ ಪುಲಗೂರು ಕೋಟೆ ವ್ಯಾಪ್ತಿಯ 800 ಎಕರೆ ಭೂಮಿ ಇವತ್ತು ಬರದಿಂದ ಮುಕ್ತವಾಗಿದೆ. ಕಳೆದ ಮಳೆಗಾಳದಲ್ಲಿ ಬಿದ್ದ ಮಳೆಯ ನೀರು ಅಕ್ಟೋಬರ್ನಲ್ಲೂ ಕಾಣಸಿಗುತ್ತದೆ. ಇದಕ್ಕೆಲ್ಲಾ ಕಾರಣವಾಗಿದ್ದು, 15 ಗ್ರಾಮಗಳ ರೈತರ ಒಗ್ಗಟ್ಟು ಹಾಗೂ ಪರಿಶ್ರಮ.

ಕರ್ನಾಟಕ ಮತ್ತು ಆಂಧ್ರಪ್ರದೇಶವನ್ನು ಪ್ರತ್ಯೇಕಿಸುವ ಬೆಟ್ಟಗುಡ್ಡಗಳ ಸಮೀಪದಲ್ಲೇ ಈ ಊರುಗಳಿವೆ. ಇಲ್ಲಿ ಬೀಳುವ ಮಳೆ ನೀರು ಸಹಜ ಎನ್ನುವಂತೆ ಹರಿದು ಆಂಧ್ರಪದೇಶದ ಕಡೆಗೆ ಹೋಗಿ ಬಿಡುತ್ತಿತ್ತು. ಕರ್ನಾಟಕದ ಈ ಹಳ್ಳಿಗಳಿಗೆ ನೀರು ಸಿಗುತ್ತಲೇ ಇರುತ್ತಿರಲಿಲ್ಲ.

ಆಗ, ಬರಪೀಡಿತವಾಗಿದ್ದ ಈ ಹಳ್ಳಿಗಳ ಜನ ಒಗ್ಗಟ್ಟಾಗಿ ನೀರು ನಿಲ್ಲಿಸಿ ಬಳಸಿಕೊಳ್ಳುವ ಸಂಕಲ್ಪ ಮಾಡಿದರು. ಅದಕ್ಕೆ ಬೇಕಾದಷ್ಟು ಹಣ ಇರಲಿಲ್ಲ. ಆಗ ನೆರವಿಗೆ ಧಾವಿಸಿದ್ದು, ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಸೋಮಶೇಖರ ರೆಡ್ಡಿ.

ಎಲ್ಲರೂ ಸೇರಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಹಣವನ್ನು ಮಂಜೂರು ಮಾಡಿಸಿಕೊಂಡರು. ಸೋಮಶೇಖರ ರೆಡ್ಡಿ ನೇತೃತ್ವದಲ್ಲಿ 15ಕ್ಕೂ ಹೆಚ್ಚು ಊರಿನ ಜನರು ಶ್ರಮದಾನ ಮಾಡುವ ಮೂಲಕ ಅಲ್ಲಲ್ಲಿ ಚೆಕ್ ಡ್ಯಾಮ್ ಕಟ್ಟಲಾರಂಭಿಸಿದರು. ಕಾಲುವೆಗಳನ್ನು ಜನರೇ ತೋಡಿದರು. ಇವೆಲ್ಲದರ ಫಲ ಎನ್ನುವಂತೆ ಬಿದ್ದ ಮಳೆ ನೀರು ಅಲ್ಲಲ್ಲಿ ನಿಲ್ಲತೊಡಗಿತು. ನೀರು ನಿಲ್ಲುತ್ತಿದ್ದಂತೆಯೇ ಹಸಿರು ಚಿಗುರತೊಡಗಿತು. ನೀರಿನ ಲಭ್ಯತೆಯಿಂದಾಗಿ ಕೃಷಿ ಚಟುವಟಿಕೆ ಜೋರಾಯಿತು.

ಈಗ ಇಲ್ಲಿ 4 ಪಂಚಾಯ್ತಿ ವ್ಯಾಪ್ತಿಯಲ್ಲಿ ನೀರು ಎಲ್ಲರಿಗೂ ಸಿಗಲಾರಂಭಿಸಿದೆ. 5 ಕಿಲೋ ಮೀಟರ್ ದೂರದವರೆಗೂ ನೀರು ನಿಲ್ಲುತ್ತದೆ. 2 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬೋರ್ವೆಲ್ಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಈಗ ಗ್ರಾಮಸ್ಥರ ಪ್ರಯತ್ನ ಫಲ ಕೊಟ್ಟಿದೆ. ನೀರಿನಿಂದ ಇಲ್ಲಿನ ಜನಜೀವನದಲ್ಲಿ ಈಗ ಹೊಸ ಉತ್ಸಾಹ ಕಾಣಿಸಿದೆ.

Follow Us:
Download App:
  • android
  • ios