Asianet Suvarna News Asianet Suvarna News

ಅಪ್ಪಿಕೊಳ್ಳುವುದರಿಂದ ಆಗುವ ಅನುಕೂಲಗಳೇನು: ರೋಗಗಳು ಮಾಯ

ಅಪ್ಪಿಕೊಳ್ಳುವುದು ಕೇವಲ ಪ್ರೀತಿಯ ಸಂಕೇತವಲ್ಲ. ಅದು ಔಷಧವಾಗಿಯೂ ಕೆಲಸ ಮಾಡಬಲ್ಲುದು. ಝೆನ್ ಮನೋ ವೈದ್ಯ ಪದ್ಧತಿಯಲ್ಲಿ ಅಪ್ಪುಗೆಗೆ ವಿಶಿಷ್ಟ ಸ್ಥಾನಮಾನವೇ ಇದೆ! ಇದರಿಂದ ಏನೇನು ಲಾಭ ಇರಬಹುದು?

Advantages for Hug

- ಎಡೆಯೂರು ಪಲ್ಲವಿ (ಕನ್ನಡ ಪ್ರಭ)

ಪ್ರೀತಿಯನ್ನು ಮತ್ತೊಬ್ಬರಿಗೆ ತಲುಪಿಸಲು ಸುಲಭದ ದಾರಿ ಅಪ್ಪುಗೆ. ಈ ಅಪ್ಪುಗೆ ಎನ್ನುವುದು ಪ್ರೇಮಿಗಳು, ಗಂಡ- ಹೆಂಡತಿ, ತಾಯಿ- ಮಗು, ಅಪ್ಪ- ಮಗ ಇವರ ನಡುವೆ ಮಾತ್ರ ಸುತ್ತುವರಿಯುವ ಪ್ರೀತಿಯ ಸರಕೂ ಅಲ್ಲ. ಒಳ್ಳೆಯ ಕೆಲಸ ಮಾಡಿದನೆಂಬ ಕಾರಣಕ್ಕಾಗಿ ನಿಮ್ಮ ಸಹೋದ್ಯೋಗಿಯನ್ನೂ ಅಪ್ಪಿಕೊಂಡಿದ್ದೀರಿ. ಬಕ್ರೀದ್‌ನಂಥ ಹಬ್ಬಗಳಲ್ಲಿ, ಮದುವೆಯಂಥ ಶುಭ ಸಮಾರಂಭಗಳಲ್ಲಿ ಅಪರೂಪದವರು ಸಿಕ್ಕಾಗ ಮನಸ್ಸಾರೆ ಹಿಗ್ಗಿ ಅಪ್ಪಿಕೊಂಡಿದ್ದೀರಿ. ಮುಖದ ತುಂಬ ನಗುವನ್ನು ಪ್ರಕಟಿಸಿದ್ದೀರಿ. ಆದರೆ, ನಿಮ್ಗೆ ಗೊತ್ತಾ? ಝೆನ್ ಮನೋ ವೈದ್ಯ ಪದ್ಧತಿಯಲ್ಲಿ ಅಪ್ಪುಗೆಗೆ ವಿಶಿಷ್ಟ ಸ್ಥಾನಮಾನವೇ ಇದೆ!

ಪರಸ್ಪರ ತಬ್ಬಿಕೊಳ್ಳುವಿಕೆ ನಮ್ಮಲ್ಲಿ ಲವಲವಿಕೆಗೆ ಕಾರಣವಾಗುತ್ತದೆ. ಮಾನಸಿಕ ಆರೋಗ್ಯವನ್ನು ಹಸನಾಗಿಡುತ್ತದೆ. ನಮಗೆ ಅರಿವಿಲ್ಲದೆ ಕೆಲವು ತೊಂದರೆಗಳಿಗೆ ಇದು ಪರಿಹಾರವೂ ಆಗುತ್ತದೆ. ‘ಹಗ್ಗಿಂಗ್ ಥೆರಪಿ’ ಅಥವಾ ‘ಅಪ್ಪುಗೆ ಚಿಕಿತ್ಸೆ’ ಅಂತಲೇ ಪ್ರಸಿದ್ಧವಾಗಿರುವ ಈ ಪ್ರಕ್ರಿಯೆಯನ್ನು ಅನುಸರಿಸುವವರೂ ಹೆಚ್ಚಾಗಿದ್ದಾರೆ. ಅದರಲ್ಲೂ ಸದಾ ಕಂಪ್ಯೂಟರ್ ಮುಂದೆ ಕುಳಿತು, ಕೆಲಸದೊತ್ತಡವನ್ನು ತಲೆಮೇಲೆ ಹೇರಿಕೊಂಡು, ನೆಮ್ಮದಿಯನ್ನೇ ಮರೆತು ಕುಳಿತ ಈಗಿನ ಪೀಳಿಗೆಗೆ ‘ಹಗ್ಗಿಂಗ್ ಥೆರಪಿ’ ಅಮೂಲ್ಯ ಲಾಭಗಳನ್ನೇ ತಂದುಕೊಟ್ಟಿದೆ.

ಅಪ್ಪಿಕೊಂಡರೆ ಏನು ಲಾಭ?

- ಹಗ್ ಮಾಡುವುದರಿಂದ ‘ಆಕ್ಸಿಟಾಸಿನ್’ ಹಾರ್ಮೋನಿನ ಉತ್ಪತ್ತಿ ಹೆಚ್ಚಾಗುತ್ತದೆ. ಈ ಹಾರ್ಮೋನ್ ಒಂಟಿತನ, ಮಾನಸಿಕ ಖಿನ್ನತೆ, ಒತ್ತಡ, ಚಿಂತೆ, ಕೋಪದ ಗುಣಗಳನ್ನು ನಿರ್ಮೂಲನೆ ಮಾಡುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲೂ ಸಹಕಾರಿ.

- ಅಪ್ಪಿಕೊಳ್ಳುವುದರಿಂದ ಮನಸ್ಸಿಗೆ ಮಾತ್ರವಲ್ಲದೆ ನಮ್ಮ ಸ್ನಾಯುಗಳಿಗೂ ಆರಾಮದಾಯಕ ಅನುಭವ ಸಿಗುತ್ತದೆ. ಇದು ಚುಟುಕು ವ್ಯಾಯಾಮ ಕೂಡ. ಅಪ್ಪಿಕೊಂಡ ವ್ಯಕ್ತಿಯ ಸಾಂಗತ್ಯದಲ್ಲಿ ಬೆರೆಯುತ್ತಾ ನಮ್ಮೆಲ್ಲಾ ಚಿಂತೆಗಳನ್ನು ಮರೆತು, ನೋವು ನಿವಾರಕ ಮಾತ್ರೆಯಾಗಿ ಅಪ್ಪುಗೆ ಕೆಲಸ ಮಾಡುತ್ತದೆ.

- ಆಪ್ತರನ್ನು ಕನಿಷ್ಠ 10 ಸೆಕೆಂಡ್ ಅಪ್ಪಿಕೊಂಡರೆ ನರಮಂಡಲದಲ್ಲಿ ವಿಶೇಷ ಬದಲಾವಣೆಗಳನ್ನು ಗುರುತಿಸಬಹುದು. ಬುದ್ಧಿವಂತರನ್ನು, ಸಜ್ಜನರನ್ನು ಅಪ್ಪಿಕೊಂಡಾಗ ಅವರ ಧನಾತ್ಮಕ ಪ್ರಭಾವ ನಮ್ಮ ಮೇಲಾಗುತ್ತದೆ.

- ಅಪ್ಪುಗೆಗೆ ಭಾಷೆಯ ಅಗತ್ಯವಿಲ್ಲ. ವೌನದಿಂದಲೇ ನಿನ್ನೊಂದಿಗೆ ನಾನಿದ್ದೇನೆ ಎಂಬುದನ್ನು ಸೂಕ್ಷ್ಮವಾಗಿ ತಿಳಿಸಿ ಎರಡು ಜೀವಿಗಳ, ಸಂಬಂಧಗಳ ನಡುವೆ ಗಟ್ಟಿಯಾದ ಬೆಸುಗೆ ಮೂಡುತ್ತದೆ. ನಂಬಿಕೆ, ಸುರಕ್ಷತಾ ಭಾವನೆ ಅರಳಲು ಕಾರಣವಾಗುತ್ತದೆ.

- ಅಪ್ಪುಗೆಯಿಂದ ಶತ್ರುವನ್ನೂ ಮಿತ್ರನನ್ನಾಗಿಸಬಹುದು. ಶಾಂತಿಯ ದ್ಯೋತಕವಾಗಿರುವ ಅಪ್ಪುಗೆ ನಮ್ಮಲ್ಲಿ ಸಂಯಮ, ಸಮಾಧಾನಗಳನ್ನೂ ಬೆಳೆಸುತ್ತದೆ.

- ಹೃದ್ರೋಗ ಇದ್ದವರು ಅಪ್ಪುಗೆ ಚಿಕಿತ್ಸೆಯನ್ನು ಅಳವಡಿಸಿಕೊಳ್ಳುವುದು ಉತ್ತಮ. ಮಾನಸಿಕ ಸಂತೋಷದಿಂದ ರಕ್ತಸಂಚಾರವೂ ಸುಗಮವಾಗುತ್ತದೆ.

- ಅಪ್ಪುಗೆಯಿಂದ ನಮ್ಮ ಮೇಲಿನ ನಂಬಿಕೆ, ಪ್ರೀತಿ ಹೆಚ್ಚಾಗಿ ನಾವೊಬ್ಬ ಸ್ಪೆಷಲ್ ವ್ಯಕ್ತಿ ಎಂಬ ಬಾವನೆ ಉಂಟಾಗುತ್ತದೆ. ಮಾನವ ಸಂಘಜೀವಿಯೆಂಬ ಅಂಶ ಬಲಗೊಳ್ಳುತ್ತದೆ.

- ಮೆದುಳಿನ ನರಮಂಡಲದಲ್ಲಿ ಪಾಸಿಟಿವ್ ಸಿಗ್ನಲ್‌ಗಳು ಹೆಚ್ಚಾಗುತ್ತವೆ. ಮನಸ್ಸನ್ನು ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತದೆ. ಮೆದುಳಿನ ಆಯಾಸವನ್ನು ಶೇ.80ರಷ್ಟು ತಗ್ಗಿಸುತ್ತದೆ.

- ಒಬ್ಬರನ್ನು ತುಂಬಾ ಕಾಲ ಅಪ್ಪಿಕೊಳ್ಳುವುದರಿಂದ ಮಾನಸಿಕ ಸಂತಸ ಮತ್ತು ಚೈತನ್ಯದಾಯಕ ಭಾವನೆ ಉಂಟಾಗಿ ಮನಸ್ಸಿಗೆ ಮುದ ಸಿಗುತ್ತದೆ.

- ಅಪ್ಪುಗೆಯು ಧ್ಯಾನದಷ್ಟೇ ಮತ್ತು ನಗುವಿನಷ್ಟೇ ಪರಿಣಾಮಕಾರಿ. ಎಂಥ ಸಂದಿಗ್ಧ ಪರಿಸ್ಥಿತಿಯನ್ನೂ ಎದುರಿಸುವ ಭರವಸೆ ಮೂಡುತ್ತದೆ.

- ಇಬ್ಬರು ವ್ಯಕ್ತಿಗಳು ಅಪ್ಪಿಕೊಳ್ಳುವುದರಿಂದ ಧನಾತ್ಮಕದ ಎನರ್ಜಿ ಬದಲಾಗುವುದರಿಂದ ಇಬ್ಬರ ನಡುವಿನ ಪ್ರೀತಿ, ಸಂಬಂಧದಲ್ಲಿ ನಂಬಿಕೆ ಹೆಚ್ಚಾಗುತ್ತದೆ. ನಿಮ್ಮ ಜೀವನನ್ನು ಸದಾ ಉತ್ಸಾಹದಿಂದ ಕಾಯ್ದುಕೊಂಡು, ಸೂರ್ತಿದಾಯಕ ಹೊಸ ಆಲೋಚನೆಗಳನ್ನು ತುಂಬಿ ಬದುಕನ್ನು ಹೊಸ ಆಯಾಮದಿಂದ ನೋಡುವಂತೆ ಮಾಡುತ್ತದೆ.

Follow Us:
Download App:
  • android
  • ios