Asianet Suvarna News Asianet Suvarna News

ಬ್ರೆಸ್ಟ್ ಕ್ಯಾನ್ಸರ್'ಗೆ ಬೆಸ್ಟ್ ಆನ್ಸರ್

ಸ್ತನ ಕ್ಯಾನ್ಸರ್ ಪತ್ತೆಗೆ ಮ್ಯಾಮೊಗ್ರಾಮ್ ಮಾತ್ರ ಮಾರ್ಗವಲ್ಲ. ಬೇರೆ ಆಧುನಿಕ ವಿಧಾನಗಳೂ ಬಂದಿವೆ. ಸುಧಾರಿತ ಚಿಕಿತ್ಸೆಗಳು ಹಲವು ಬಂದಿವೆ. ಇವುಗಳ ಲಾಭ ನಷ್ಟಗಳೇನು ಎಂಬುದರ ಸುತ್ತ ಇಲ್ಲೊಂದು ವೈದ್ಯಕೀಯ ಮಾಹಿತಿಯಿದೆ

Best Answer To Breast Cancer

ಸ್ತನ ಕ್ಯಾನ್ಸರ್ ಪತ್ತೆಗೆ ಮ್ಯಾಮೊಗ್ರಾಮ್ ಮಾತ್ರ ಮಾರ್ಗವಲ್ಲ. ಬೇರೆ ಆಧುನಿಕ ವಿಧಾನಗಳೂ ಬಂದಿವೆ. ಸುಧಾರಿತ ಚಿಕಿತ್ಸೆಗಳು ಹಲವು ಬಂದಿವೆ. ಇವುಗಳ ಲಾಭ ನಷ್ಟಗಳೇನು ಎಂಬುದರ ಸುತ್ತ ಇಲ್ಲೊಂದು ವೈದ್ಯಕೀಯ ಮಾಹಿತಿಯಿದೆ

- ಡಾ. ಸೌರಭ ಕುಮಾರ್

ಕಳೆದ 10 ವರ್ಷಗಳಲ್ಲಿ ಸ್ತನ ಕ್ಯಾನ್ಸರ್‌ನ ತೀವ್ರತೆ ಹೆಚ್ಚಾಗಿದೆ. ಗರ್ಭನಾಳದ ಕ್ಯಾನ್ಸರನ್ನೂ ಇದು ಹಿಂದಿಕ್ಕಿ ಭಾರತದ ಮಹಿಳೆಯರನ್ನು ಕಾಡುತ್ತಿದೆ. ಈ ಹಿಂದೆ ಇದು ಶ್ರೀಮಂತ ರಾಷ್ಟ್ರಗಳಲ್ಲಷ್ಟೇ ಕಾಣಿಸಿಕೊಳ್ಳುತ್ತಿದ್ದ ರೋಗವಾಗಿತ್ತು. ಈಗ ಇದು ಭಾರತವನ್ನೂ ಆವರಿಸಿದೆ. ನಗರಗಳನ್ನೂ ಒಳಗೊಂಡಂತೆ ಗ್ರಾಮೀಣ ಪ್ರದೇಶಗಳಲ್ಲೂ ರೋಗ ಪತ್ತೆಯಾಗಿದೆ. ಪ್ರಮುಖವಾಗಿ ಜೀವನಶೈಲಿಯಲ್ಲಾದ ಬದಲಾವಣೆ ಜೊತೆಗೆ ಆನುವಂಶಿಕ ಕಾರಣವೇ ಇದರ ಬೇರಾಗಿರುತ್ತದೆ. ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿದರೆ ಸ್ತನ ಕ್ಯಾನ್ಸರನ್ನು ಸಮರ್ಥವಾಗಿ ಗುಣಪಡಿಸಬಹುದು.

ಅಷ್ಟಕ್ಕೂ ಈ ರೋಗವನ್ನು ಪತ್ತೆಹಚ್ಚಲು ಮ್ಯಾಮೊಗ್ರಾಮ್ ಮಾತ್ರ ಗೊತ್ತು. ಬೇರೆ ವಿಧಾನಗಳ ಬಗ್ಗೆ ಸಾಮಾನ್ಯರಿಗೆ ಇನ್ನೂ ತಿಳಿವಳಿಕೆ ಇಲ್ಲ. ಸುಧಾರಿತ ಚಿಕಿತ್ಸೆಗಳು ಹಲವು ಬಂದಿವೆ. ಇವುಗಳ ಲಾಭ ನಷ್ಟಗಳೇನು ಎಂಬುದರ ಸುತ್ತ ಇಲ್ಲೊಂದು ವೈದ್ಯಕೀಯ ಮಾಹಿತಿಯಿದೆ.

1. ಡಿಜಿಟಲ್ ಮ್ಯಾಮೊಗ್ರಾಮ್

ಮ್ಯಾಮೊಗ್ರಾಮ್ ವಿಧಾನದ ಸುಧಾರಿತ ರೂಪ. ಈ ವಿಧಾನದಲ್ಲಿ ನಿಖರವಾದ ದೃಷ್ಟಿಸ್ಪಷ್ಟತೆ ಹಾಗೂ ಕಡಿಮೆ ಪ್ರಮಾಣದ ರೇಡಿಯೇಶನ್ ಇರುತ್ತದೆ. ಭವಿಷ್ಯದ ಉಪಯೋಗಕ್ಕಾಗಿ ಹಾಗೂ ಸ್ಕಾ ನಿಂಗ್‌ನ ಅವಧಿಯವರೆಗೆ ಅಂಕಿಅಂಶಗಳನ್ನು ಸಂಗ್ರಹಿಸಿಡಲು ಇದು ಅತ್ಯಂತ ಉಪಯೋಗಕಾರಿ. ರೇಡಿಯಾಲಜಿಸ್ಟ್ ಬೇಕಾಗಿಲ್ಲದ ಕಂಪ್ಯೂಟರ್ ಸಂಯೋಜಿತ ರೋಗಪತ್ತೆ ವಿಧಾನಗಳೂ ಇಲ್ಲಿವೆ. ಹಾಗಾಗಿ ಇವು ಹೆಚ್ಚಿನ ಮ್ಯಾಮೊಗ್ರಾಮ್‌ಗಳನ್ನು ಓದಬಲ್ಲವು. ಆದರೆ ಸಂಶಯವುಳ್ಳ ಕೇಸುಗಳನ್ನು ಮಾತ್ರ ತಜ್ಞ ಕಣ್ಣುಗಳಿಂದಲೇ ನೋಡಬೇಕಾಗುತ್ತದೆ. ಅಂಗಹಾನಿಗಳನ್ನು ಪತ್ತೆಹಚ್ಚಲು ಅಟೋಮೇಟೆಡ್ ವ್ಯವಸ್ಥೆಗಳು ಸ್ಟ್ಯಾಂಡರ್ಡ್ ಫಾರ್ಮ್ಯಾಟುಗಳನ್ನು ಹೊಂದಿವೆಯಾದರೂ ತಪ್ಪುಗಳುಂಟಾಗುವ ಪ್ರಮಾಣವು ಇನ್ನೂ ಹೆಚ್ಚಾಗಿಯೇ ಇವೆ.

2. ಅಲ್ಟ್ರಾ ಸೊನೊಗ್ರಾಮ್

ಮ್ಯಾಮೊಗ್ರಾಮ್‌ಗೆ ಒಡನಾಡಿಯಾಗಿ ಹೆಚ್ಚು ಜನಪ್ರಿಯವಾಗಿರುವ, ಸಾಮಾನ್ಯವಾಗಿ ಬಳಕೆಯಾಗುತ್ತಿರುವ ವಿಧಾನ. ಇದು ಆಕ್ರಮಣಕಾರಿಯಲ್ಲದ ಹಾಗೂ ರೇಡಿಯೇಶನ್ ಇಲ್ಲದ ಉಪಕರಣ. ಇದು ರೋಗಪತ್ತೆ ವಿಧಾನಕ್ಕೆ ಹೆಚ್ಚಿನ ಸಹಯೋಗವನ್ನು ನೀಡುತ್ತದೆ ಮತ್ತು ಸಂಶಯಿತ ಅಂಗಹಾನಿಯ ಬಯಾಪ್ಸಿ ಮಾಡುವಲ್ಲಿ ನೆರವಾಗುತ್ತದೆ. ಎಬಿಯುಎಸ್‌ನಂಥ ಅಟೊಮೇಟೆಡ್ ಬ್ರೆಸ್ಟ್ ಅಲ್ಟ್ರಾಸೌಂಡ್‌ನಂಥ ಕೆಲವು ವಿಶೇಷ ಅಲ್ಟ್ರಾಸೌಂಡ್ ಆಧಾರಿತ ಸ್ತನ ಸ್ಕ್ರೀನಿಂಗ್ ತಂತ್ರಜ್ಞಾನಗಳೂ ಲಭ್ಯವಿವೆ. ವೈದ್ಯರು ಅಸ್ವಾಭಾವಿಕತೆಯ ನಿಖರ ಸ್ಥಾನ ಹಾಗೂ ರೋಗದ ವಿಧವನ್ನು ಪತ್ತೆಹಚ್ಚಲು ನೆರವಾಗುವಂತೆ ೩ಡಿ ನೋಟವನ್ನು ರೂಪಿಸಲು ಈ ವ್ಯವಸ್ಥೆಗಳು ಅಲ್ಟ್ರಾಸೌಂಡ್ ಬಳಸಿಕೊಳ್ಳುತ್ತವೆ. ಗಾಢ ಸ್ತನಗಳನ್ನು ಹೊಂದಿರುವವರಿಗೆ ಇವು ಅತ್ಯಂತ ಲಾಭಕರ.

3. ಮ್ಯಾಗ್ನೆಟಿಕ್ ರೆಸೊನನ್ಸ್ ಇಮೇಜಿಂಗ್

ಇದು ಇತ್ತೀಚೆಗೆ ಜನಪ್ರಿಯವಾಗಿರುವ ವಿಧಾನ. ಇದರಲ್ಲಿ ಹೆಚ್ಚಿನ ವಿವರಗಳು ಲಭ್ಯವಾಗುತ್ತವೆ ಮತ್ತು ರೇಡಿಯೇಶನ್ ಇರುವುದಿಲ್ಲ. ಇದರ ಪ್ರಮುಖ ಅವಗುಣವೆಂದರೆ, ರೋಗ ಅಧ್ಯಯನಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಸ್ಕ್ಯಾನಿಂಗ್ ವೆಚ್ಚವೂ ಅಧಿಕ. ಪರಿಣತರ ಕೊರೆತ ಹಾಗೂ ಅಧಿಕ ವೆಚ್ಚದ ಉಪಕರಣಗಳು ಈ ಪ್ರಕಾರವನ್ನು ಕಡಿಮೆ ಜನಪ್ರಿಯತೆಯ ಸಾಧನವನ್ನಾಗಿಸಿವೆ. ಆದರೆ, ಹೆಚ್ಚುತ್ತಿರುವ ಅರಿವು ಹಾಗೂ ಹಲವಾರು ವೈದ್ಯರು ಎಂಆರ್‌ಐ ಸ್ಕ್ಯಾನ್ ಬಳಸಲು ಆಸಕ್ತಿವಹಿಸುತ್ತಿರುವುದು ಕಂಡುಬರುತ್ತಿದೆ.

4. ಥರ್ಮೋಗ್ರಾಮ್

ಕಡಿಮೆ ವಯಸ್ಸಿನ ವ್ಯಕ್ತಿಗಳಲ್ಲಿ ಆರಂಭಿಕ ಹಂತದಲ್ಲಿಯೇ ಸ್ತನಕ್ಯಾನ್ಸರ್ ಪತ್ತೆಹಚ್ಚಲು ಮ್ಯಾಮೊಗ್ರಾಂ ಬದಲಾಗಿ ಥರ್ಮೊಗ್ರಾಂ ಬಳಸಲಾಗುತ್ತಿದೆ. ತರುಣ ವಯಸ್ಸಿನವರಲ್ಲಿ ಮ್ಯಾಮೋಗ್ರಾಂ ಬಳಸುವುದನ್ನು ಯಾವಾಗಲೂ ನಿರ್ಬಂಧಿಸಲಾಗುತ್ತದೆ. ಯಾಕೆಂದರೆ ಇದರಲ್ಲಿ ಹೆಚ್ಚಿನ ರೇಡಿಯೇಶನ್ ಉಂಟಾಗುತ್ತದೆ. ಗಾಢವಾದ ಸ್ತನಗಳಿದ್ದಾಗ ಇಮೇಜ್ ಗುಣಮಟ್ಟ ಚೆನ್ನಾಗಿರುವುದಿಲ್ಲ. ಇದು ದೇಹದಲ್ಲಿನ ಹೆಚ್ಚಿನ ಉಷ್ಣ ಚಟುವಟಿಕೆಗಳನ್ನು ಗುರುತಿಸುತ್ತದೆ. ಇದು ನಿಯಮಿತ ಚಿಕಿತ್ಸೆಯಾಗಿ ಇನ್ನೂ ಮೌಲ್ಯಮಾಪನಕ್ಕೆ ಒಳಪಡುತ್ತಲಿದೆ.

5. ಸ್ವಯಂ ಸ್ತನ ಪರೀಕ್ಷೆ

ಇವತ್ತಿಗೂ ಇದು ಉತ್ತಮ ವಿಧಾನ. ಪ್ರತಿ ತಿಂಗಳೂ ಸ್ವಯಂ ಸ್ತನ ಪರೀಕ್ಷೆ ಮಾಡಿಸಿಕೊಂಡರೆ, ಮುಂಚಿತವಾಗಿ ರೋಗದಿಂದ ಬಚಾವಾಗಬಹುದು. ವರ್ಷಕ್ಕೊಮ್ಮೆ ವೈದ್ಯರಿಂದ ತಪಾಸಿಸಿಕೊಳ್ಳಬೇಕು. ಆರಂಭಿಕ ಹಂತದ ಸ್ತನಕ್ಯಾನ್ಸರ್ ಪತ್ತೆಗಾಗಿ ಯಾವ ಎಕ್ಸ್‌ರೇ ಅಥವಾ ಇಮೇಜಿಂಗ್ ತಂತ್ರಜ್ಞಾನವೂ ಈ ವಿಧಾನಕ್ಕೆ ಸರಿಸಾಟಿಯಿಲ್ಲ. ಇದು ತುಂಬ ಸರಳ. ಪ್ರತಿಯೊಬ್ಬರೂ ಇದನ್ನು ತಾವೇ ಪರೀಕ್ಷಿಸಿಕೊಳ್ಳಬಹುದು. ಸಮೀಪದ ವೈದ್ಯರನ್ನು ಭೇಟಿಯಾಗಿ ಈ ವಿಧಾನ ತಿಳಿಯುವುದು ಉತ್ತಮ. ಸ್ತನ ಮತ್ತು ಅದರ ಸುತ್ತಲಿನ ಪ್ರತಿ ಬೆಳವಣಿಗೆಯನ್ನು ಗಮನಿಸುತ್ತಾ ಹೋಗುವುದೇ ಇಲ್ಲಿನ ಗುಟ್ಟು.

ಕೃಪೆ: ಕನ್ನಡ ಪ್ರಭ

Follow Us:
Download App:
  • android
  • ios