Asianet Suvarna News Asianet Suvarna News

ನಿಮ್ಮ ದೃಷ್ಟಿ ನಮ್ಮ ಕಣ್ಣುಗಳ ಮೇಲಿರದೇ ನಮ್ಮ ಅಂಗಾಂಗಗಳ ಮೇಲೆ ಯಾಕಿದೆ? ಒಂಚೂರು ಆಕಾಶ ಲೇಖನ

‘ಕಲ್ಲರಳಿ ಹೂವಾಗಿ', ‘ಮಾತಾಡ್‌ ಮಾತಾಡ್‌ ಮಲ್ಲಿಗೆ', ‘ಅವ್ವ ', ‘ಡಿಸೆಂಬರ್‌ 1', ‘ಯಾರೇ ಕೂಗಾಡಲಿ', ಮೊನ್ನೆ ಮೊನ್ನೆ ಬಿಡುಗಡೆಯಾದ ‘ಶುದ್ಧಿ'- ಮುಂತಾದ ಚಿತ್ರಗಳಲ್ಲಿ ನಟಿಸಿದ ಬುದ್ಧಿವಂತ ನಟಿ ನಿವೇದಿತಾ ಹಲವು ಆಸಕ್ತಿಗಳ ಮೊತ್ತ. ಒಳ್ಳೆಯ ಸಿನಿಮಾ, ಒಳ್ಳೆಯ ಕತೆ, ಪ್ರವಾಸ, ಹೋರಾಟ, ಪ್ರತಿಭಟನೆ ಅಂತೆಲ್ಲ ಓಡಾಡುವ ನಿವೇದಿತಾ ತಮ್ಮೊಳಗೆ ಹಲವು ಪ್ರಶ್ನೆಗಳನ್ನಿಟ್ಟು​ಕೊಂಡವರು. ಈ ವಾರದಿಂದ ಕೆಲವು ಕಾಲ ‘ಭಾನುಪ್ರಭ'ದಲ್ಲಿ ಅವರ ಅಂಕಣ ಒಂಚೂರು ಆಕಾಶ ಪ್ರಕಟವಾಗುತ್ತದೆ. ಅನ್ನಿಸಿದ್ದನ್ನು ದಿಟ್ಟವಾಗಿ ಹೇಳುವ ನಿವೇದಿತಾ ಅವರ ಅಂಕಣದ ಮೊದಲ ಕಂತು ಇದು.

why men eyes on parts of women body asks niveditha in her onchooru akasha column

ಅಂಕಣ | ಒಂಚೂರು ಆಕಾಶ

ನಾನು ನಟಿಸಿದ ‘ಶುದ್ಧಿ' ಚಿತ್ರ ತೆರೆ ಕಂಡ ನಂತರದ ದಿನಗಳಲ್ಲಿ, ಚಿತ್ರತಂಡದ​ವರೆಲ್ಲ ಅನೇಕ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದೆವು. ಮೊದಮೊದಲು, ಈ ಭೇಟಿಗೆಂದೇ ತಂಡ ನೀಡಿದ್ದ ಟೀಶರ್ಟನ್ನೇ ತೊಟ್ಟುಕೊಂಡು ಹೋಗುತ್ತಿದ್ದೆ. ಅದು ದೊಡ್ಡ ಸೈಜಿನದಾಗಿದ್ದರಿಂದ ಕ್ರಮೇಣ ನಾನು ನನಗಿಷ್ಟವಾದ ಉಡುಪುಗಳನ್ನು ಹಾಕ್ಕೊಂಡ್‌ ಹೋಗಕ್ಕೆ ಶುರು ಮಾಡಿದೆ. ಕೆಲವು ಸಲ ಪ್ಯಾಂಟ್‌, ಕೆಲವು ಸಲ ಫ್ರಾಕ್‌, ಕೆಲವು ಸಲ ಸ್ಕರ್ಟ್‌.. ಹೀಗೆ ನನ್ನ ಚಿತ್ತಾನುಸಾರವಾಗಿ ಬಟ್ಟೆತೊಡುವವಳು ನಾನು. ಬೇಸಿಗೆ ಆದ್ದರಿಂದ, ಅಂದು ಒಂದು ಚಿಕ್ಕ ಫ್ರಾಕ್‌ ಧರಿಸಿ ಹೋಗಿದ್ದೆ.. ಶೋ ಮುಗಿದು ಜನರೆಲ್ಲ ಈಚೆ ಬಂದು ನಮಗೆ ಅಭಿನಂದನೆ ಹೇಳಿ ನಮ್ಮ ಜೊತೆ ಸೆಲ್ಫೀ ತೆಗೆದುಕೊಳ್ಳುತ್ತಿದ್ದರು. ಈ ಮಧ್ಯೆ ಒಬ್ಬ ನನ್ನ ಬಳಿ ಬಂದು, ನಮ್ಮ ನಿರ್ದೇಶಕರನ್ನು ಕರೆದು, ‘ಎಲ್ಲಾ ಓಕೇ, ಆದ್ರೆ ಮೇಡಮ್‌ ಈ ತರಹ ಚಿಕ್ಕ ಬಟ್ಟೆಗಳನ್ನು ಧರಿಸುವುದು ಸರಿ ಇಲ್ಲ, ಇದು ನಮ್ಮ ಸಂಸ್ಕೃತಿಯಲ್ಲ.. ಇದೇ ಅತ್ಯಾಚಾರಕ್ಕೆಲ್ಲ ಕಾರಣ ಆಗುತ್ತೆ' ಅಂದ! ಈ ತರಹದ ಘಟನೆ ನಡೆದಿದ್ದು 3ನೇ ಬಾರಿ. ವ್ಯಂಗ್ಯವೆಂದರೆ, ನಮ್ಮ ಚಿತ್ರದಲ್ಲಿ ಒಂದು ಅತ್ಯಾಚಾರದ ಸನ್ನಿವೇಶ ಇದೆ.. ಅದರಲ್ಲಿ ಆ ಯುವತಿ ಚೂಡೀದಾರ್‌ ಧರಿಸಿದ್ದಾಳೆ!

ಅವನ ನೇರ ನುಡಿಯನ್ನು ನಾನು ಮೆಚ್ಚಿಕೊಳ್ಳುತ್ತೇನೆ. ಅವನ ಆ ಮಾತು ಒಂದು ವಿಚಾರ ವಿಮರ್ಶೆ, ಸಂವಾದಕ್ಕೆ ಎಡೆ ಮಾಡಿಕೊಡು​ತ್ತದೆ.. ಆದರೆ, ನನ್ನಲ್ಲಿ ಅಚ್ಚರಿ ಮೂಡಿಸುವುದೇನಂದರೆ, ಅವನಲ್ಲಿ​ರುವ ‘ನಾನೊಬ್ಬ ಗಂಡು, ನನಗೆ ಒಬ್ಬ ಹೆಣ್ಣನ್ನು ಹೀಗೆ ಪ್ರಶ್ನಿಸುವ ಅ​ಧಿಕಾರ ಇದೆ' ಎನ್ನೋ ಮನೋಭಾವ! ಹಾಗೂ ‘ಇಲ್ಲಿ ಗಂಡು ಜಾತಿಗೆ ಸೇರಿದ ನಿರ್ದೇಶಕ​ರಿದ್ದಾರಲ್ಲ, ಅವರಾದರೂ ಈಕೆಯನ್ನು ಕೇಳಬಾರದೆ?' ಎನ್ನುವ ಪ್ರತಿಷ್ಠೆ. ಅವನು, ಹೊರಗಿನವಳಾದ ನಟಿಯಾದ ನನ್ನನ್ನೇ ಹೀಗೆ ಪ್ರಶ್ನಿಸುತ್ತಾನಲ್ಲ, ಇನ್ನು ಅವನ ಮನೆಯಲ್ಲಿರುವ ಹೆಂಗಸರ ಜೊತೆ ಅವನ ವರ್ತನೆ ಹೇಗಿರಬಹುದು? ಅವರ ಜೀವನದ ಮೇಲೆ ಅವನ ಹಿಡಿತ ಎಷ್ಟಿರಬಹುದು?

ಅವನ ಹಾಗೆ, ನನ್ನನ್ನು ನೋಡಿದ ಇನ್ನೂ ಹಲವರ ಅನಿಸಿಕೆ ಇದೇ ಆಗಿರಬಹುದು. ಅಂತರ್ಜಾಲದಲ್ಲಿ ಒಂದು ಲೇಖನ ಓದಿದೆ.. ‘ರೇಪ್‌ಗೆ ಕಾರಣವೇನು' ಎನ್ನೋ ಪ್ರಶ್ನೆಗೆ ಜನರು ಕೊಟ್ಟಉತ್ತರಗಳ ಸಂಕಲನ ಅದು. ಅದರಲ್ಲಿ ಪದೇ ಪದೇ ಕಂಡುಬಂದ ಒಂದು ಉತ್ತರವೆಂದರೆ, ‘ಹೆಣ್ಣು ಬಟ್ಟೆನೆಟ್ಟಗೆ ಹಾಕೋಬೇಕು' ಅಂತ.. 

ಅವರಿಗೆಲ್ಲ ನಾನು ಕೇಳುವ ಕೆಲವು ಪ್ರಶ್ನೆಗಳು..
* ನಿಮ್ಮ ದೃಷ್ಟಿಯಾಕೆ ನಮ್ಮ ಕಣ್ಣುಗಳ ಮೇಲಿರದೇ ನಮ್ಮ ಅಂಗಾಂಗದ ಮೇಲಿದೆ? 
* ನಿಮ್ಮ ಗಮನ ಯಾಕೆ ನಮ್ಮ ಮಾತುಗಳ ಹೊರತು ನಮ್ಮ ಆಕಾರದ ಮೇಲಿದೆ? 
* ನಿಮ್ಮ ಮೇಲೆ ಪ್ರಭಾವ ಬೀರುತ್ತಿರುವುದು ನಮ್ಮ ಇರುವಿಕೆಯ ಹೊರತು ನಮ್ಮ ಬಟ್ಟೆಯಾಕಾಗಿದೆ? 
* ಹಳ್ಳಿಗಳಲ್ಲಿ ಹಲವು ಅತ್ಯಾಚಾರಗಳು ನಡೆಯುತ್ತಲ್ಲ, ಅದಕ್ಕೆ ಏನು ಕಾರಣ? ಹಳ್ಳಿ ಹುಡುಗಿಯರಂತೂ ಚಿಕ್ಕ ಬಟ್ಟೆಧರಿಸುವ ಪ್ರಮೇಯವೇ ಇಲ್ಲವಲ್ಲ!
* ಮನೆಗಳಲ್ಲಿ, ಲೈಂಗಿಕ ದೌರ್ಜನ್ಯ ನಡೆಯುತ್ತಲ್ಲ, ಅದಕ್ಕೆ ಏನು ಕಾರಣ? 
* ಬಾಸ್ಟನ್ನಿನ ಚರ್ಚ್'ಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಲ್ಲ? (ಈ ವಿಷಯದ ಮೇಲೆ ‘ಸ್ಪಾಟ್‌ಲೈಟ್‌' ಎನ್ನುವ, ನೈಜ ಘಟನೆಗಳನ್ನು ಆಧರಿಸಿರುವ ಆಸ್ಕರ್‌ ಪುರಸ್ಕೃತ ಚಿತ್ರವಿದೆ) ಅದೂ ಉಡುಪು ಸರಿಯಾಗಿ ಹಾಕದಿರುವುದರಿಂದಲೇ?
* ಬುಡಕಟ್ಟು ಜನಾಂಗದಲ್ಲಿ ಬಟ್ಟೆಯೇ ಧರಿಸದ ಅಥವಾ ಅರೆ ನಗ್ನ ಹೆಂಗಸರೇ ಜಾಸ್ತಿ.. ಹಾಗಿದ್ದರೆ, ಪ್ರತಿನಿತ್ಯ ಅಲ್ಲಿ ಅತ್ಯಾಚಾರ ನಡೀತಿರ್ಬೇಕಲ್ವಾ?
* ಗಂಡಸರ ಮೇಲೆ ಅತ್ಯಾಚಾರ ನಡೆಯುತ್ತಲ್ಲ.. ಅದಕ್ಕೂ ಬಟ್ಟೇನೇ ಕಾರಣನಾ? 
* ನಮ್ಮ ದೇಶ ಒಂದು ಸ್ವತಂತ್ರ ದೇಶವಾಗಿರುವು​ದರಿಂದ ನನಗಿಷ್ಟವಾದ ಉಡುಪು ಧರಿಸುವುದು ನನ್ನ ಹಕ್ಕಲ್ಲವೇ? 
* ನಮ್ಮ ಸಂಸ್ಕೃತಿ ಅನ್ನುತ್ತೀರಲ್ಲ, ಆ ನಮ್ಮ ಸಂಸ್ಕೃತಿಯ ಸಾಕಾರರೂಪವಾದ ದೇವಸ್ಥಾನಗಳಲ್ಲಿ ಅರೆ ಬಟ್ಟೆ ಧರಿಸಿರುವ ಹೆಂಗಸರ ಶಿಲ್ಪಗಳೇ ತುಂಬಿರುತ್ತವಲ್ಲ, ಅದಕ್ಕೆಲ್ಲ ನಾವು ಬಟ್ಟೆ ಹೊದಿಸಬೇಕಲ್ಲವೇ? 
* ನಮ್ಮ ಸಂಸ್ಕೃತಿಯ ಉಡುಪಾದ ಸೀರೆಯಲ್ಲಿ ಅಷ್ಟೆಲ್ಲ ಸೊಂಟ ಕಾಣುತ್ತೆ, ಬೆನ್ನು ಕಾಣುತ್ತೆ, ಅದು ಓಕೇ ಆದ್ರೆ, ಪಾಶ್ಚಾತ್ಯ ಉಡುಪುಗಳಲ್ಲಿ ಕಂಡರೆ ಏನು ತೊಂದರೆ? 
* ಒಂದು ರೇಪ್‌ ನಡೆದಾಗ, ನಿಮ್ಮ ಗಮನ, ಗಂಡು ಕಳೆದುಕೊಂಡ ಸ್ಥಿಮಿತವನ್ನು ಬಿಟ್ಟು, ಆ ಹೆಣ್ಣು ಇರುವ ಪರಿಸ್ಥಿತಿಯನ್ನು ಬಿಟ್ಟು, ಅವಳು ಆಗ ಯಾವ ಬಟ್ಟೆಧರಿಸಿದ್ದಳು ಎನ್ನುವುದರ ಮೇಲೆ ಯಾಕೆ ಇದೆ?
* ಅವಳ ಬಟ್ಟೆಯ ಕಡೆ ಗಮನ ಹೋದಾಗ, ಮೊದಲು ಒಂದು ಸಮಾಜವಾಗಿ, ನಮ್ಮ ಒಳಹೊಕ್ಕು ‘ಈ ತರಹದ ಆಲೋಚನೆ ಯಾಕೆ ಬರುತ್ತಿದೆ ನಮಗೆ' ಅಂತ ನೋಡಿಕೊಳ್ಳಬೇಕಲ್ಲವೇ?

​ಸಮಾಜ, ಅದು ಬಹಳ ವರ್ಷಗಳಿಂದ ಕಟ್ಟಿಕೊಂಡು ಬಂದ ಕಟ್ಟುಪಾಡುಗಳನ್ನು ಹಠಾತ್ತಾಗಿ ಮುರಿದು ಹೊರಬರಲು ಸಾಧ್ಯವಿಲ್ಲವೆಂದು ನನಗೆ ಗೊತ್ತು.. ಹಾಗೂ, ಮುಂದೊಂದು ದಿನ, ಉಡುಪು, ಅತ್ಯಾಚಾರದ ಚರ್ಚೆಯ ಕೇಂದ್ರಬಿಂದು ಆಗಿರುವುದಿಲ್ಲವೆಂದೂ ಗೊತ್ತು.. ಅದೇ ನಿಟ್ಟಿನಲ್ಲಿ ಈ ಲೇಖನ, ಎತ್ತಿರುವ ಪ್ರಶ್ನೆಗಳು ಅದೇ ಹಾದಿಯಲ್ಲಿ ಒಂದು ಹೆಜ್ಜೆ.

‘ರಾಕ್ಷಸನಾದ ರಾವಣನೂ ಕೂಡ, ತಾನು ಅಪಹರಿಸಿದ ಸೀತೆಯ ಮೈ ಮುಟ್ಟುವುದಿಲ್ಲ, ಅವಳ ಇಷ್ಟಕ್ಕೆ ವಿರುದ್ಧವಾಗಿ' ಅನ್ನುವುದರಲ್ಲಿ ನಮ್ಮ ಸಂಸ್ಕೃತಿಯ ಸತ್ವ ಅಡಗಿದೆ.. ಆದರೆ ನಾವು, ತೊಡುವ ಉಡುಪಿಗೆ ಸೀಮಿತಗೊಳಿಸುತ್ತಿದ್ದೀವಿ ನಮ್ಮ ಸಂಸ್ಕೃತಿಯನ್ನ! ನಮ್ಮ ಸಂಸ್ಕೃತಿಯ ವಿಶಾಲತೆಯನ್ನು, ಆಳವನ್ನು ಅರಿಯೋ ಪ್ರಯತ್ನ ಮಾಡೋಣ, ಪುಟ ತಿರುವೋಣ.

- ನಿವೇದಿತಾ, ನಟಿ-ಚಿಂತಕಿ
epaper.kannadaprabha.in

Follow Us:
Download App:
  • android
  • ios