Asianet Suvarna News Asianet Suvarna News

ವಿಚಾರಣ: ವಾಲ್ಮೀಕಿಯ ಶ್ರೀರಾಮ ಮತ್ತು ಯೂರೋಪಿನ ಶೀಲಪಟ್ಟಿ

ಯಾವುದೇ ಕಳಂಕವಿಲ್ಲದ, ಸಣ್ಣ ತಪ್ಪನ್ನೂ ಮಾಡದ ಮಹಾಪುರುಷ ಇರಲು ಸಾಧ್ಯವೇ? ನನಗಿನ್ನೂ ಕಂಡುಬಂದಿಲ್ಲ. ಗಾಂಧಿಯೂ ಸುಳ್ಳು ಹೇಳಿದ್ದ, ತನ್ನ ಹೆಂಡತಿಯನ್ನೇ ಹೊಡೆದಿದ್ದ. ಧರ್ಮ ಕಾಪಾಡುವ ನೆವದಲ್ಲಿ ಕೃಷ್ಣನೂ ಸುಳ್ಳು 'ಸೃಷ್ಟಿ'ಸಿದ್ದ. ಹಾಗೇ, ಯುಗಪುರುಷನಾದ ಶ್ರೀರಾಮನ ಹಲವು ವರ್ತನೆಗಳಲ್ಲೂ ನಾವು ಮೋಸ, ವಂಚನೆ ಕಾಣಬಹುದು. ಆದರೆ ಶ್ರೀರಾಮನನ್ನು ವಾಲ್ಮೀಕಿ ಚಿತ್ರಿಸಿರುವ ರೀತಿಯಲ್ಲೇ ಈ ತಕರಾರಿಗೆ ನಿಗೂಢ ಉತ್ತರವೂ ಇರುವ ಸಾಧ್ಯತೆ ಇದೆ.

vicharana column article on sri rama

ಅಂಕಣ: ವಿಚಾರಣ
ಲೇಖಕರು: ಕೆ.ಎನ್.ಗಣೇಶಯ್ಯ, ಕಾದಂಬರಿಕಾರರು

‘ಶೀಲ ಶೀಲವೆಂದು ಗರ್ವಿಸಿ ನುಡಿವುತಿಪ್ಪರು, ಶೀಲವಾವುದೆಂದರಿಯರು./ ಇದ್ದುದ ವಂಚ­ನೆಯ ಮಾಡದಿಪ್ಪುದೆ ಶೀಲ, ಇಲ್ಲದಿದ್ದುದಕ್ಕೆ ಕಡನ ಬೇಡದಿಪ್ಪುದೆ ಶೀಲ,/ ಪರಧನ ಪರಸತಿಗೆಳ­ಸದಿಪ್ಪುದೆ ಶೀಲ, ಪರದೈವ ಪರಸಮಯಕ್ಕೆಳಸದಿಪ್ಪುದೆ ಶೀಲ,/ ಗುರುನಿಂದೆ ಜಂಗಮನಿಂದೆಯ ಕೇಳದಿಪ್ಪುದೆ ಶೀಲ, ಕೂಡಲಚೆನ್ನಸಂಗನ ಶರಣರ ಬರವಿಂಗೆ/ ಮುಯ್ಯಾಂತು ಪರಿಣಾಮಿಸ ಬಲ್ಲರೆ ಅಚ್ಚ ಶೀಲ -ಸಕಳೇಶ ಮಾದರಸ'

ಯಾವುದೇ ಕಳಂಕವಿಲ್ಲದ, ಸಣ್ಣ ತಪ್ಪನ್ನೂ ಮಾಡದೆ ಸಂಪೂರ್ಣ ಜೀವನ ನಡೆಸಿದ ಮಹಾಪುರುಷ ಇರಲು ಸಾಧ್ಯವೇ? ನನಗಿನ್ನೂ ಕಂಡುಬಂದಿಲ್ಲ. ಗಾಂಧಿಯೂ ಸುಳ್ಳು ಹೇಳಿದ್ದ. ತನ್ನ ಹೆಂಡತಿಯನ್ನೇ ಹೊಡೆದಿದ್ದ. ಧರ್ಮ ಕಾಪಾಡುವ ನೆವದಲ್ಲಿ ಕೃಷ್ಣನೂ ಸುಳ್ಳು ‘ಸೃಷ್ಟಿ'ಸಿದ್ದ. ಕೆಲವು ರಹಸ್ಯಗಳನ್ನು ತನ್ನೊಳಗೆ ಬಚ್ಚಿಟ್ಟು­ಕೊಂಡಿದ್ದು, ಸಮಯ ಬಂದಾಗ, ‘ಸ್ವಾರ್ಥ' ಸಾಧನೆಗೆ ಉಪಯೋಗಿಸಿದ್ದ. ಹಾಗೆಯೇ, ಯುಗಪುರುಷನಾದ ಶ್ರೀರಾಮನೂ ಕೆಲವೊಮ್ಮೆ ಶ್ರೀಸಾಮಾನ್ಯನಂತೆಯೇ ವರ್ತಿಸಿದ್ದ ಎನ್ನುವುದಕ್ಕೆ, ಎಲ್ಲರಿಗೂ ಪರಿಚಿತವಿರುವ, ಕನಿಷ್ಠ ಎರಡು ಘಟನೆಗಳು ಸಾಕ್ಷಿಯಾಗುತ್ತವೆ.

ಮೊದಲನೆಯದು: ಲಂಕೆಗೆ ಹೋಗಿ ರಾವಣನನ್ನು ಕೊಂದು ಸೀತೆಯನ್ನು ಸ್ವೀಕರಿಸುವ ಸಮಯದಲ್ಲಿ ಅಕ­ಳಂ­ಕ­ಳಾದ ಆಕೆಯ ಪಾತಿವ್ರತ್ಯವನ್ನು ಜನಸಮೂಹದೆ­ದುರೇ ಪ್ರಶ್ನಿಸಿ, ಸಾಬೀತುಪಡಿಸುವಂತೆ ಒತ್ತಾಯಿಸಿದ್ದು. ವನವಾಸಕ್ಕೆ ಹೊರಟು ನಿಂತಾಗ, ‘ನಿನ್ನನಲ್ಲದೆ ನಲ್ಲ ಕೋಸಲ ನೆಲವನಲ್ಲ ನಾನೊಲ್ದುದಂದು,/ಮನೆಯೆ­ನಗೆ ರಮಣನೆರ್ದೆಯಲ್ಲದೆಯೆ ಮಾವನರಮನೆಯಲ್ತು (ಕುವೆಂಪು, ಶ್ರೀ ರಾಮಾಯಣ ದರ್ಶನಂ)' ಎಂದು ವಾದಿಸಿ ಜೊತೆ ನಡೆದು, 14 ವರ್ಷಗಳ ಸುದೀರ್ಘ ಕಾಲ ಗೆಡ್ಡೆ, ಗೆಣಸು, ಹಣ್ಣುಗಳನ್ನೆ ತಿಂದು ಬದುಕಿ, ಊರ್ಮಿಳೆಯನ್ನು ಬಿಟ್ಟು ಬಂದಿದ್ದ ಲಕ್ಷ್ಮಣನ ಮನ­ಸ್ಸಿಗೆ ಎಂದೂ ಘಾಸಿಯಾಗದಂತೆ ನೋಡಿಕೊಳ್ಳುವ ಸೂಕ್ಷ್ಮತೆ ತೋರುವ ಸಲುವಾಗಿ, ರಾಮನೊಡನೆ ತನ್ನ ಸರಸ-ಸಲ್ಲಾಪಗಳನ್ನೂ ಹಿಡಿತದಲ್ಲಿಟ್ಟುಕೊಂಡೇ ಬದು­ಕಿದ್ದ ಸೀತೆಯ ‘ಪತಿವ್ರತಾ' ಪಾವಿತ್ರ್ಯತೆಗೆ ಬೆಲೆ ಕೊಡದೆ ಆಕೆಯನ್ನು ಬೆಂಕಿಗೆ ಹಾರಲು ಹೇಳುವ ಶ್ರೀರಾಮ ಆ ಸಮಯದಲ್ಲಿ ಶ್ರೀಸಾಮಾನ್ಯನಾಗುತ್ತಾನೆ!

ಎರಡನೇ ಘಟನೆ ಉತ್ತರ ರಾಮಾಯಣದ ರಾಮ­ನಿಗೆ ಸಂಬಂಧಿಸಿದ್ದು. ಅಯೋಧ್ಯೆಗೆ ಹಿಂದಿರುಗಿದ ಮೇಲೆ, ಪತ್ನಿಯ ಮೇಲಿನ ನಂಬಿಕೆಗೂ ಹೆಚ್ಚಾಗಿ, ಅಗಸ­ನೊಬ್ಬನ ಶಂಕೆಯ ಮಾತಿಗೇ ಬೆಲೆಯಿತ್ತು ಗರ್ಭವತಿ­ಯಾ­ಗಿದ್ದ ಸೀತೆಯನ್ನು ಕಾಡಿಗೆ ಅಟ್ಟುವಾಗಲೂ ಶ್ರೀರಾಮ ಮತ್ತೆ ಶ್ರೀಸಾಮಾನ್ಯನಾಗುತ್ತಾನೆ.

ಈ ಎರಡೂ ಘಟನೆಗಳು ಅನಾದಿ ಕಾಲದಿಂದಲೂ ಹೆಣ್ಣಿನ ಶೀಲದ ಬಗ್ಗೆ ಮನುಕುಲ ಕಟ್ಟಿಕೊಂಡಿರುವ ಕಟ್ಟು­ಪಾಡಿನತ್ತ ಬೆಟ್ಟು ಮಾಡಿ ತೋರುತ್ತವೆ. ಉದಾತ್ತರೂ, ಉನ್ನತ ಚಿಂತಕರು ಎಂದು ಪರಿಗಣಿಸ­ಲಾಗಿರುವ ಕವಿಗಳು ಕೂಡ, ಸಾವಿರಾರು ವರ್ಷಗಳ ಹಿಂದೆ ರಚಿಸಿರುವ ರಾಮಾಯಣದಂಥ ಮಹಾಪೌರಾ­ಣಿ­ಕಗಳಲ್ಲೂ ಶ್ರೀರಾಮನಂತಹ ಯುಗಪುರುಷನ ಮೂಲ­ಕವೂ, ಹೆಣ್ಣಿನ ಶೀಲ ಎಷ್ಟುಮುಖ್ಯ ಎಂದು ವೈಭವೀಕರಿಸುವಲ್ಲಿ ಒಂದು ಆಶ್ಚರ್ಯ ಕಾಣುತ್ತದೆ. ಶ್ರೀರಾಮನಂಥ ಮಹಾಪುರುಷನಿಗೂ ಸೀತೆಯು ತನ್ನ ಶೀಲವನ್ನು ಕಾಪಾಡಿಕೊಳ್ಳುವ ಅವಶ್ಯಕತೆಯು, ಆಕೆಯ ಜೀವಕ್ಕಿಂತಲೂ ಪ್ರಮುಖ ಎಂದು ಕಂಡಿತ್ತೇ ಎಂಬ ಆಶ್ಚರ್ಯ ಒಂದೆಡೆಯಾದರೆ, ಉತ್ತರ ರಾಮಾಯಣದ­ಲ್ಲಂತೂ, ಪತ್ನಿಯ ಶೀಲದ ಮೇಲಿನ ಕೇವಲ ಶಂಕೆಯೇ ತನ್ನ ವಂಶಕುಡಿಗಳನ್ನೇ ತೊರೆಯುವ ಮಟ್ಟಕ್ಕೆ ಗಂಭೀರ­ವಾಗಿ ಶ್ರೀರಾಮನನ್ನು ಕಾಡಿತ್ತು ಎನ್ನುವ ಆಶ್ಚರ್ಯ ಮತ್ತೊಂದೆಡೆ. ಶ್ರೀರಾಮನ ಈ ವರ್ತನೆಯನ್ನು ಸಮ­ರ್ಥಿಸಿಕೊಂಡು ಆತನ ದೈವತ್ವ ಎತ್ತಿಹಿಡಿಯುವ ಅನೇಕ ರೀತಿಯ ವಾದಗಳನ್ನು ಒಡ್ಡುವವರಿದ್ದರೂ, ಇಡೀ ಪ್ರಕ­ರಣ­ದಲ್ಲಡಗಿರುವ ಒಂದು ಕಟುಸತ್ಯವನ್ನು ಯಾರೂ ಅಲ್ಲಗಳೆಯಲಾಗದು: ಹೆಣ್ಣಿನಲ್ಲಿ ಪಾತಿವ್ರತ್ಯ ನಿರೀಕ್ಷಿ­ಸುವ ಕಟ್ಟುಪಾಡುಗಳನ್ನು ಅಂದಿನ ಶ್ರೀರಾ­ಮನೂ ಗೌರ­ವಿಸುತ್ತಿದ್ದ, ಆ ಸಾಮಾಜಿಕ ಮೌಲ್ಯಗಳ ಮಹತ್ವ ಎತ್ತಿ­ಹಿಡಿಯಲು ತಾನೂ ಬದ್ಧನಾಗಿದ್ದ ಎಂಬ ಸತ್ಯ, ಅಂಥ ವ್ಯಕ್ತಿಯನ್ನು ತಮ್ಮ ಮಾದರಿ ನಾಯಕನ­ನ್ನಾಗಿಸುವಲ್ಲಿ ಕವಿ ತೋರಿರುವ ಸಾಮಾಜಿಕ ಬದ್ಧತೆಯ ಸತ್ಯ.

ಏಕೆ ಹೀಗೆ? ಅನಾದಿ ಕಾಲದಿಂದಲೂ ಹೆಣ್ಣು ಶೀಲ ಕಾಪಾಡಿಕೊಳ್ಳಬೇಕು ಎನ್ನುವ ಕಟ್ಟುಪಾಡಿಗೆ ಮಾನವ ಸಮಾಜ ಏಕೆ ಜೋತುಬಿದ್ದಿದೆ? ಗಂಡಿಗಿಲ್ಲದ ಶೀಲದ ವ್ಯಥೆ ಮತ್ತು ಅದನ್ನು ಕಾಪಾಡಿಕೊಳ್ಳುವ ಕರ್ತವ್ಯ ಹೆಣ್ಣಿಗೆ ಮಾತ್ರ ಏಕಿದೆ? ಇಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸಬೇಕು: ಮದುವೆಯಾಗುವವರೆಗೆ ಹೆಣ್ಣು ತನ್ನ ಕನ್ಯತ್ವ ಕಾಪಾಡಿಕೊಳ್ಳಬೇಕು ಎಂಬ ಕಟ್ಟುಪಾಡು ಒಂದಾದರೆ, ಮದುವೆಯಾದ ಮೇಲೆ ಸುಮಂಗಲೆಯು ತನ್ನ ಪತಿಯನಲ್ಲದೆ ಬೇರಾರಿಗೂ ತನ್ನ ತನುಮನ ಒಪ್ಪಿಸಬಾರದು ಎಂಬುದು ಮತ್ತೊಂದು ಕಟ್ಟುಪಾಡು. ರಾಮಾಯಣದ ಕತೆಯ ಹಿನ್ನೆಲೆಯಲ್ಲಿ, ಇವುಗಳಲ್ಲಿ ಎರಡನೇ ಕಟ್ಟುಪಾಡು, ಅಂದರೆ, ಸುಮಂಗಲೆಯು ತನ್ನ ಪಾತಿವ್ರತ್ಯ ಕಾಪಾಡಿಕೊಳ್ಳಬೇಕೆಂಬ ಸಾಮಾಜಿಕ ನಿರೀಕ್ಷೆ ಪ್ರಸ್ತುತವಾಗುತ್ತದೆ. ವಿಚಿತ್ರವೆಂದರೆ, ಈ ಎರಡನೇ ಕಟ್ಟುಪಾಡು ಕೂಡ ಕೇವಲ ಭಾರತದ ಸಮಾ­ಜಕ್ಕೆ ಮೀಸಲಾಗದೆ ಬಹುಪಾಲು ಎಲ್ಲ ಮಾನವ ಸಮಾ­ಜಗಳಲ್ಲೂ ಹಾಸುಹೊಕ್ಕಾಗಿದೆ. ಹಲವು ಸಮುದಾಯಗ­ಳ­ಲ್ಲಂತೂ, ಕೆಲವು ಕಾಲಘಟ್ಟಗಳಲ್ಲಿ ಇದರ ಬಗೆಗಿನ ಕಾಳಜಿ ಎಂಥ ಕ್ರೂರ ರೂಪ ತಳೆದಿತ್ತೆಂದರೆ, ಬೇರೊಬ್ಬ ಗಂಡಿನೊಂದಿಗೆ ತನ್ನ ಪತ್ನಿ ದೇಹ ಹಂಚಿಕೊಳ್ಳುವ ಸಾಧ್ಯತೆ ನಿರ್ಬಂಧಿಸಲು, ಗಂಡುಭೂಪರು ‘ಶೀಲ-ಬೀಗ'ಗಳನ್ನೂ ಅವಿಷ್ಕರಿಸಿದ್ದರು!

ಕ್ರಿ.ಶ 1889ರಲ್ಲಿ, ಜರ್ಮನಿಯ ಆಂಟೋನ್‌ ಪಾಚಿಂಜರ್‌ ಎಂಬ ಪ್ರಾಚೀನ ವಸ್ತುಗಳ ಸಂಗ್ರಹಕಾ­ರನಿಗೆ ಆಸ್ಟ್ರಿಯಾದ ಒಂದು ಸಮಾಧಿಯಲ್ಲಿ ದೊರಕಿದ ಹೆಣ್ಣಿನ ಅಸ್ಥಿಪಂಜರದ ಸುತ್ತ ಚರ್ಮ ಮತ್ತು ಲೋಹದ ಒಂದು ಸೊಂಟಪಟ್ಟಿ ದೊರೆಯುತ್ತದೆ. 16ನೇ ಶತಮಾನದಲ್ಲಿ ಹೂಳಲಾದ ಆ ಹೆಣ್ಣಿನ ದೇಹದ ಮೇಲೆ ಕಂಡ ಪಟ್ಟಿಯ ಉಪಯೋಗ ಮತ್ತು ಔಚಿತ್ಯವನ್ನು ಅಧ್ಯಯನ ಮಾಡಿದಾಗ ತಿಳಿದದ್ದು ಒಂದು ಕಠೋರ ಸತ್ಯ: ಆ ಪಟ್ಟಿ, ಆಕೆ ತನ್ನ ಶೀಲ ಕಳೆದುಕೊಳ್ಳಬಾರದೆಂದು ಬಲವಂತವಾಗಿ ಹಾಕಲಾದ ಶೀಲ ಕಾಪಾಡುವ ಬೀಗದ ಪಟ್ಟಿ! ಚರಿತ್ರಕಾರರ ಪ್ರಕಾರ, ಇದು ಕೇವಲ 16ನೇ ಶತಮಾನಕ್ಕೆ ಮೀಸಲಾದ ಕ್ರಮವಲ್ಲ. ಕ್ರಿ.ಶ 1100ದಿಂದ 1500ರ ಅವಧಿಯಲ್ಲಿನ ಕ್ರೂಸೇಡ್‌ ಸಂದರ್ಭದಲ್ಲೂ ಹೆಂಗಸರಿಗೆ ಇಂಥ ಶೀಲ ಬೀಗಗಳನ್ನು ಹಾಕಿ ಹೋಗು­ತ್ತಿದ್ದರೆಂದು ಚರಿತ್ರೆಯ ಉಲ್ಲೀಖಗಳಿವೆ. ಈಗಲೂ, ಮನೆಯಿಂದ ಹೊರಗೆ ಹೋಗುವಾಗ ಪತ್ನಿಯನ್ನು ಮನೆಯೊಳಗೇ ಬಿಟ್ಟು ಬೀಗ ಹಾಕಿಹೋಗುವ ಭೂಪತಿ ಗಂಡುಗಳ ಬಗ್ಗೆ ಅಲ್ಲಲ್ಲಿ ಕೇಳಿರುತ್ತೇವೆ!

ಈ ಶೀಲ ನಿರ್ಬಂಧ ಅಥವಾ ಕಟ್ಟುಪಾಡು ಹೆಣ್ಣಿಗೆ ಮಾತ್ರ ಮೀಸಲಾಗಿರುವುದು ದೊಡ್ಡ ದುರಂತ. ಮಾನವ ಸಮಾಜವೇಕೆ ಇಂಥ ಅಸಮಾನತೆ ಪೋಷಿಸಿ­ಕೊಂಡು ಬಂದಿದೆ? ಶತಮಾನಗಳಿಂದಲೂ ಕೋಟಿ ಕೋಟಿ ಗಂಡಸರು, ಅತ್ಯದ್ಭುತ ಚಿಂತಕರು, ಯುಗ­ಪುರುಷರೂ ಹುಟ್ಟಿಸತ್ತಿದ್ದರೂ ಸಮಾಜದಲ್ಲಿನ ಈ ಅಸಮಾನತೆ ಪ್ರಶ್ನಿಸುವ, ಅದನ್ನು ವಿರೋಧಿಸಿ ಬದಲಾ­ಯಿಸಲು ಪ್ರಯತ್ನಿಸಿದ ಗಂಡುಗಳೇ ಹುಟ್ಟಲಿಲ್ಲವೇ? ಮನುಕುಲ ಅಷ್ಟುಮತಿಹೀನವೇ? ರಾಮಾಯಣದಂಥ ಅದ್ಭುತ ಮಹಾಕಾವ್ಯ ರಚಿಸಿದ ವಾಲ್ಮೀಕಿಗೂ ಇದರ ಬಗ್ಗೆ ಅಸಹನೆ ತೋರಲು ಕಷ್ಟವೆನಿಸಿರಬಹುದೇ?

ಸೂಕ್ಷ್ಮವಾಗಿ ಅವಲೋಕಿಸಿದರೆ, ಈ ನಿಟ್ಟಿನಲ್ಲಿ, ವಾಲ್ಮೀಕಿ ತನ್ನ ಕಾಲ-ದೇಶಗಳನ್ನೂ ಮೀರಿ ನಿಂತ ಮಹಾಕವಿ ಎಂಬ ಅದ್ಭುತ ಸತ್ಯದ ಅರಿವಾಗುತ್ತದೆ. ಬಹುಶಃ ಹೆಣ್ಣುಗಂಡಿನ ನಡುವಣ ಶೀಲದ ಬಗ್ಗೆ ಇರುವ ಅಸಮಾನತೆಯ ದುರಂತ ಸತ್ಯ ಪ್ರಶ್ನಿಸಲೆಂದೇ ವಾಲ್ಮೀಕಿಯು ತನ್ನ ಕೃತಿಯಲ್ಲಿ ಎರಡು ವೈರುಧ್ಯಗಳನ್ನು ಎದುರುಬದುರಾಗಿ ತಂದಿರಬಹುದೇ ಎಂಬ ಶಂಕೆ ಗಾಢವಾಗಿ ಮೂಡುತ್ತದೆ. ಹೆಣ್ಣಿನ ಶೀಲ ಪ್ರಶ್ನಿಸುವ ಶ್ರೀರಾಮನನ್ನು ಏಕಪತ್ನೀವ್ರತನನ್ನಾಗಿಸಿ ಚಿತ್ರಿಸುವಲ್ಲಿ ಕವಿಗೆ ಒಂದು ಉದ್ದೇಶವಿದ್ದಿರಬಹುದು ಅನಿಸುತ್ತದೆ. ಹೆಣ್ಣಿನಷ್ಟೇ ಗಂಡೂ ತನ್ನ ತನುಮನವನ್ನು ಪತ್ನಿಗೆ ಮೀಸಲಾಗಿಸಿದ್ದರೆ ಮಾತ್ರ, ಪತ್ನಿಯಲ್ಲೂ ಅಂಥದ್ದೇ ಬದ್ಧತೆ ನಿರೀಕ್ಷಿಸುವ ನೈತಿಕ ಹಕ್ಕು ಅವನಿಗಿರುತ್ತದೆ ಎಂಬ ಸೂಕ್ಷ್ಮನೀತಿಯನ್ನು ವಾಲ್ಮೀಕಿ ಅಡಗಿಸಿ ಇಟ್ಟಿರಬ­ಹುದು. ವಾದಗಳಿಂದ ಮಾಡಲಾಗದ ನೈತಿಕ ಕ್ರಾಂತಿ­ಯನ್ನು ವಾಲ್ಮೀಕಿ, ತನ್ನ ನಾಯಕನ ಜೀವನಕ್ರಮದ ಮೂಲಕ ಬೋಧಿಸಿದ ಹಾಗಿದೆ. ಬಹುಶಃ ಇದೇ ಕಾರ­ಣಕ್ಕೆ ಸಾಮಾನ್ಯವಾಗಿ ಆ ಕಾಲಘಟ್ಟದಲ್ಲಿ ಕಂಡುಬರುವ ಬಹುಪತ್ನಿಯರನ್ನು ಹೊಂದಿದ್ದ ಬಹುಪಾಲು ರಾಜರಿ­ಗಿಂತ ತನ್ನ ಕಥಾನಾಯಕನನ್ನು ಭಿನ್ನ ಅಚ್ಚಿನಲ್ಲಿ ಮೂಡಿ­ಸಿರಬಹುದು. ಈ ಮೂಲಕ ಕವಿಯು, ಹೆಣ್ಣಿ­ಗಾ­ಗಿರುವ ಅನ್ಯಾಯವನ್ನು ತನ್ನ ನಾಯಕನ ನಡೆ- ನುಡಿಯಲ್ಲೇ ಸೂಕ್ಷ್ಮವಾಗಿ ಎತ್ತಿತೋರಿದ್ದಾನೆ ಎನಿಸುತ್ತದೆ.

ರಾಮಾಯಣದಲ್ಲಿ ಬರುವ ಮತ್ತೊಂದು ವಿಶೇಷ ಸಂಗತಿ ಗಮನಿಸಿದರೆ, ಪ್ರಮುಖವಾಗಿ ಈ ಶೀಲ ಅಸಮಾನತೆ ಎತ್ತಿ ತೋರುವ ಉದ್ದೇಶದಿಂದಲೇ ರಚಿಸ­ಲಾದ ಕೃತಿ ವಾಲ್ಮೀಕಿ ರಾಮಾಯಣ ಆಗಿರ­ಬಹುದು ಎಂಬ ನಂಬಿಕೆಗೆ ಪುಷ್ಟಿದೊರೆಯುತ್ತದೆ. ಉದಾಹ­ರಣೆಗೆ, ಶಿಲೆಯಾಗಿದ್ದ ಅಹಲ್ಯೆಯನ್ನು ಶ್ರೀರಾಮ ತನ್ನ ಪಾದಸ್ಪರ್ಶದಿಂದ ಚೇತನಗೊಳಿಸಿ ಶಾಪದಿಂದ ಬಿಡುಗ­ಡೆಗೊಳಿಸುವ ಘಟನೆ ರಾಮಾಯಣದ ಕೇಂದ್ರ ಕಥಾ­ಭಾಗಕ್ಕೆ ಸಂಬಂಧವೇ ಇಲ್ಲದ್ದಾದರೂ ಅತ್ಯಂತ ಪ್ರಮು­ಖವಾಗಿ ಕಥಾಭಾಗದಲ್ಲಿ ಸೇರಿಸಲಾಗಿದೆ. ಇಂದ್ರನ ಜೊತೆ ಅನೈತಿಕ ಸಂಬಂಧ ಹೊಂದಿದ ಪರಿಣಾಮವಾಗಿ ಅಹಲ್ಯೆ ಶತಶತಮಾನಗಳ ಕಾಲ ಜಡಶಿಲೆಯಾಗಿ ಬದುಕುತ್ತಾಳೆ ಎಂಬುದು ಬಹುಶಃ ಶತಮಾನಗಳಿಂದ ಪರಗಂಡಿನ ಸಖ್ಯ ಬಯಸಿದ ಕೋಟಿ ಅಹಲ್ಯೆಯರನ್ನು ನಿರ್ಭಾವ, ನಿರ್ಜೀವ ವಸ್ತುಗಳಂತೆ ಕಂಡಿರುವ ಸಮಾಜದ ಕ್ರೂರವರ್ತನೆಗೆ ರೂಪಕದಂತೆ ವಾಲ್ಮೀಕಿ ಚಿತ್ರಿಸಿರಬಹುದೇ? ಅಲ್ಲದೆ, ಅದೇ ಅಹಲ್ಯೆಗೆ ಏಕಪತ್ನಿವ್ರತನಾದ ಶ್ರೀರಾಮನಿಂದಲೇ ಮರುಜೀವ ಕೊಡಿಸುವಲ್ಲಿ ಕವಿ ಒಂದು ಸೂಕ್ಷ್ಮ ಸೂಚನೆಯನ್ನೂ ಇಟ್ಟಿರಬಹುದೇ? ತನ್ನ ಶೀಲವನ್ನು ಒಂದೇ ಹೆಣ್ಣಿಗೆ ಮುಡಿಪಿಟ್ಟು ಕಾಪಾಡಿಕೊಳ್ಳುವ ಗಂಡಿಗೆ ಮಾತ್ರ ಅಹಲ್ಯೆಯರಂಥ ಹೆಣ್ಣುಗಳನ್ನು ತಿದ್ದುವ, ಮರುರೂಪಿ­ಸುವ ಹಕ್ಕಿದೆ ಎಂಬ ದಿಟ್ಟಪಾಠವನ್ನು ಈ ಮೂಲಕ ವಾಲ್ಮೀಕಿ ಬೋಧಿಸುವ ಪ್ರಯತ್ನ ಮಾಡಿರಬಹುದೇ? ರಾಮಾಯಣದ ಕಾಲದಿಂದ ಹಿಡಿದು ಇಂದಿನವರೆಗೂ ಪ್ರಪಂಚಾದ್ಯಂತ ಲಕ್ಷ ಲಕ್ಷ ಹೆಂಗಸರು ಗೌತಮನಂಥ ಗಂಡಂದಿರಿಂದ ಕ್ರೂರಶಾಪಕ್ಕೆ ಬಲಿಯಾಗುತ್ತಲೇ ಬಂದಿದ್ದರೂ, ಅವರನ್ನು ಅಂಥ ಶಾಪಕೂಪಕ್ಕೆ ತಳ್ಳುವ ಇಂದ್ರರು ಮಾತ್ರ ತಲೆಯೆತ್ತಿ ನಡೆಯಲು ಅವಕಾಶ ಮಾಡಿಕೊಟ್ಟಿರುವ ನಮ್ಮ ಸಮಾಜ ಬದಲಾಗಬೇಕಿದ್ದರೆ ಶ್ರೀರಾಮ ಮತ್ತೆ ಹುಟ್ಟಿಬರಬೇಕಷ್ಟೆ!

(epaper.kannadaprabha.in)

Follow Us:
Download App:
  • android
  • ios