Asianet Suvarna News Asianet Suvarna News

ಪರಭಾಷೆಯ ಪೋಷಕ ನಟರಿಗೆ ಕನ್ನಡದಲ್ಲಿ ಸ್ಟಾರ್ ಮರ್ಯಾದೆ!: ನಮಗಿಲ್ಲದ ಗೌರವ ಅವರಿಗೇಕೆ ಗೊತ್ತಾ?

ದಿ ವಿಲನ್ ಚಿತ್ರದ ಪಾತ್ರಕ್ಕೆ ಮಿಥುನ್ ಬಂದರು, ಅಂಜನೀಪುತ್ರಕ್ಕೆ ರಮ್ಯಾಕೃಷ್ಣ ಬರುತ್ತಿದ್ದಾರೆ. ರಾಜಕುಮಾರ ಚಿತ್ರದಲ್ಲಿ ಶರತ್ಕುಮಾರ್ ಇದ್ದರು. ಶ್ರೀಕಾಂತ್, ಅಂಬಿಕಾ, ಗೀತಾ, ಜಗಪತಿಬಾಬು, ಜಯಸುಧಾ, ಜೂಹಿಚಾವ್ಲಾ ಹೀಗೆ ಅವರು ಇವರು ಎವರೋ ಎವರು ಬರುತ್ತಾರೆ. ಅದಕ್ಕೆ ಪ್ರಚಾರ ಸಿಗುತ್ತದೆ. ಗೌರವಯುತ ಸಂಭಾವನೆ ಪಡೆದುಕೊಂಡು ಅವರು ಬಂದ ಕಡೆಗೆ ಮರಳುತ್ತಾರೆ.

Reason Why Supporting Actors Of Other Actors Are Getting STAR Respect In Sandalwood

ದಿ ವಿಲನ್ ಚಿತ್ರದ ಪಾತ್ರಕ್ಕೆ ಮಿಥುನ್ ಬಂದರು, ಅಂಜನೀಪುತ್ರಕ್ಕೆ ರಮ್ಯಾಕೃಷ್ಣ ಬರುತ್ತಿದ್ದಾರೆ. ರಾಜಕುಮಾರ ಚಿತ್ರದಲ್ಲಿ ಶರತ್ಕುಮಾರ್ ಇದ್ದರು. ಶ್ರೀಕಾಂತ್, ಅಂಬಿಕಾ, ಗೀತಾ, ಜಗಪತಿಬಾಬು, ಜಯಸುಧಾ, ಜೂಹಿಚಾವ್ಲಾ ಹೀಗೆ ಅವರು ಇವರು ಎವರೋ ಎವರು ಬರುತ್ತಾರೆ. ಅದಕ್ಕೆ ಪ್ರಚಾರ ಸಿಗುತ್ತದೆ. ಗೌರವಯುತ ಸಂಭಾವನೆ ಪಡೆದುಕೊಂಡು ಅವರು ಬಂದ ಕಡೆಗೆ ಮರಳುತ್ತಾರೆ.

ಇದು ಇತ್ತೀಚಿನ ವರ್ಷಗಳಲ್ಲಿ ವಿಪರೀತ ಆಗಿರುವ ಟ್ರೆಂಡು. ಹಿಂದೆ ಖಳನಾಯಕನ ಪಾತ್ರಕ್ಕೆ, ನಾಯಕಿ ಪಾತ್ರಕ್ಕೆ ಪರಭಾಷಾ ನಟರನ್ನು ಕರೆಸುವ ಪರಿಪಾಠ ಇತ್ತು. ಇತ್ತೀಚೆಗೆ ಅದು ಪೋಷಕ ನಟರ ಪಾತ್ರಕ್ಕೂ ಹಬ್ಬಿದೆ. ಸುಮ್ಮನೆ ಈ ಪಟ್ಟಿಯನ್ನೇ ನೋಡಿ. ಪುನೀತ್ರಾಜ್ಕುಮಾರ್ ನಟನೆಯ ‘ಅಂಜನಿಪುತ್ರ'. ಈ ಚಿತ್ರಕ್ಕಾಗಿ ರಮ್ಯಾ ಕೃಷ್ಣ ಬರುತ್ತಿದ್ದಾರೆ. ಪ್ರೇಮ್ ನಿರ್ದೇಶನದ ‘ದಿ ವಿಲನ್' ಚಿತ್ರಕ್ಕೆ ಪರಭಾಷೆಯಿಂದ ಇಬ್ಬರು ಕಲಾವಿದರ ಆಗಮನವಾಗಿದೆ. ತೆಲುಗಿನಿಂದ ಶ್ರೀಕಾಂತ್, ಬಾಲಿವುಡ್ನಿಂದ ಮಿಥುನ್ ಚಕ್ರವರ್ತಿ ಬಂದಿದ್ದಾರೆ. ಈ ನಡುವೆ ಟಿ ಎನ್ ಸೀತಾರಾಂ ಅವರ ‘ಕಾಫಿ ತೋಟ' ಚಿತ್ರಕ್ಕೆ ಅಂಬಿಕಾ ಬಂದಿದ್ದಾರೆ. ವೆರಿಗುಡ್ ಫಿಲ್ಮ್ನ ಪಾತ್ರವೊಂದಕ್ಕೆ ಜೂಹಿಚಾವ್ಲಾ ಬರುತ್ತಿದ್ದಾರೆ. ಗೀತಾ, ಜಗಪತಿ ಬಾಬು, ಮೋಹನ್ಲಾಲ್, ಜಯಸುಧಾ, ಶರತ್ಕುಮಾರ್ -ಕನ್ನಡ ಚಿತ್ರಗಳಲ್ಲಿನ ಬಹು ಮುಖ್ಯ ಪಾತ್ರಧಾರಿಗಳು. ಇನ್ನು ಸುಹಾಸಿನಿ ಅವರಂತೂ ಕನ್ನಡ ಸಿನಿಮಾಗಳ ಖಾಯಂ ಮೇಜರ್ ಪಾತ್ರದಾರಿ.

ನಮ್ಮವರೇಕಿಲ್ಲ?

ನಮ್ಮಲ್ಲೇ ಅಂಥ ಪಾತ್ರ ಮಾಡಬಲ್ಲ ಪ್ರತಿಭಾವಂತರಿಲ್ಲವೇ? ಅನಂತನಾಗ್, ಅಚ್ಯುತ, ಪ್ರಕಾಶ್ ಬೆಳವಾಡಿ, ಟಿಎನ್ ಸೀತಾರಾಮ್, ರಂಗಾಯಣ ರಘು, ರಾಜೇಶ ನಟರಂಗ, ಗಿರೀಶ ಕಾರ್ನಾಡ, ಅಶೋಕ್, ಶೋಭರಾಜು, ಸಿದ್ಲಿಂಗು ಶ್ರೀಧರ್, ಎಂಕೆ ಮಠ, ಶ್ರೀನಾಥ್, ಜೈಜಗದೀಶ್, ಶಿವಧ್ವಜ್- ಹೀಗೆ ಹುಡುಕುತ್ತಾ ಹೊರಟರೆ ಕನ್ನಡದಲ್ಲೇ ಪ್ರತಿಭಾವಂತ ಪೋಷಕ ನಟರು ಸಾಕಷ್ಟುಮಂದಿ ಸಿಗುತ್ತಾರೆ. ತಾರಾ, ಮಾಲವಿಕಾ, ಪವಿತ್ರಾ, ಕಲ್ಯಾಣಿ, ಸುಧಾರಾಣಿ, ಸುಧಾ ಬೆಳವಾಡಿ- ಹೀಗೆ ಅಮ್ಮನ ಪಾತ್ರಕ್ಕೂ ಕೊರತೆಯೇನಿಲ್ಲ. ಹಾಗಿದ್ದರೂ ಅಲ್ಲಿಯವರೇ ಯಾತಕ್ಕೆ ಬರಬೇಕು?

ಯಾಕೀ ಟ್ರೆಂಡ್?

ಕನ್ನಡ ಸಿನಿಮಾಗಳ ಮುಖ್ಯ ಪಾತ್ರಗಳಿಗೆ ಹೊರಗಿನ ಸಿನಿಮಾಗಳ ಕಲಾವಿದರನ್ನೇ ಕರೆತರುತ್ತಿರುವ ಟ್ರೆಂಡ್ ಹಿಂದಿನ ಗುಟ್ಟೇನು? ಮೊದಲನೆಯದಾಗಿ ಇಂಥ ಕಲಾವಿದರಿಂದ ಆಯಾ ಚಿತ್ರಕ್ಕೆ ಒಂದು ಹೈಪ್ ಕ್ರಿಯೇಟ್ ಆಗುತ್ತದೆ. ಜತೆಗೆ ಮಾರುಕಟ್ಟೆಯಲ್ಲೂ ಈ ಸಿನಿಮಾ ಒಂಚೂರು ಸೌಂಡು ಮಾಡುತ್ತದೆ. ಇನ್ನು ಕರ್ನಾಟಕದಲ್ಲಿ ಎಲ್ಲ ಭಾಷೆಯ ಪ್ರೇಕ್ಷಕರು ಇದ್ದಾರೆ. ಕೋಲಾರ, ರಾಯಚೂರು, ಚಿಕ್ಕಬಳ್ಳಾಪುರದಂತಹ ಪ್ರದೇಶದ ಜನರನ್ನು ಸೆಳೆಯುವುದಕ್ಕೆ ತೆಲುಗು, ಬೆಂಗಳೂರು ಸೇರಿದಂತೆ ಚಾಮರಾಜನಗರ, ಕೊಳ್ಳೆಗಾಲದ ಪ್ರೇಕ್ಷಕರನ್ನು ಆಕರ್ಷಿಸುವುದಕ್ಕೆ ತಮಿಳರು, ಹೈದರಬಾದ್ ಕರ್ನಾಟಕದವರನ್ನು ಸೆಳೆಯುವುದಕ್ಕೆ ಹಿಂದಿ, ಕರಾವಳಿಗರನ್ನು ಚಿತ್ರಮಂದಿರಗಳಿಗೆ ಕರೆತರಲು ಮಲಯಾಳಂ ಕಲಾವಿದರನ್ನು ಕರೆತರುತ್ತಾರೆ. ಆಯಾ ಭಾಷೆಯ ಪ್ರೇಕ್ಷಕರನ್ನು ತಮ್ಮ ಸಿನಿಮಾಗಳತ್ತ ಸಳೆಯುವ ತಂತ್ರವೂ ಇಂಥ ಮುಖ್ಯ ಪಾತ್ರಗಳ ಆಗಮನದ ಹಿಂದೆ ಇರುತ್ತದೆ. ಶಿವರಾಜ್ಕುಮಾರ್ ನಟನೆಯ ‘ವಜ್ರಕಾಯ' ಚಿತ್ರದಲ್ಲಿ ತೆಲುಗಿನ ರವಿತೇಜ, ತಮಿಳಿನ ಶಿವ ಕಾರ್ತಿಕೇಯನ್, ಮಲಯಾಳಂನ ಸುರೇಶ್ ಗೋಪಿ ಒಂದು ಹಾಡಿಗೆ ಹೆಜ್ಜೆ ಹಾಕಲು ಬಂದಿದ್ದು ಇದೇ ತಂತ್ರದ ಭಾಗವಾಗಿ.

ಒಟ್ಟಾರೆ ಹೀಗೆ ಮೇಜರ್ ಪಾತ್ರಗಳಿಗಾಗಿ ಹೊರಗಿನಿಂದ ಬಂದವರು ಆಯಾ ಚಿತ್ರದ ಕತೆ, ಪಾತ್ರಕ್ಕೂ ಸೂಕ್ತವೋ ಅಲ್ಲವೋ ಅವರಿಂದ ಚಿತ್ರದ ಮಾರುಕಟ್ಟೆ, ಪ್ರೇಕ್ಷಕರು ಬರುತ್ತಾರೆ ಅಂದರೆ ಅಂಥವರಿಗೆ ಬಲೆ ಬೀಸುವ ತಂತ್ರವೇ ಈ ಆಮದು ತಾರೆಗಳ ಹಿಂದಿನ ಗುಟ್ಟು ಎನ್ನುತ್ತದೆ ಚಿತ್ರೋದ್ಯಮ

-ಆರ್ ಕೇಶವಮೂರ್ತಿ, ಕನ್ನಡಪ್ರಭ

Follow Us:
Download App:
  • android
  • ios