Asianet Suvarna News Asianet Suvarna News

ಮಾತೆಲ್ಲಾ ಪಟಾಕಿ, ಬೇರೆಲ್ಲಾ ಬಿಟ್ಹಾಕಿ

ಏನೇ ಆದರೂ ಪೊಲೀಸ್ಅಂದರೆ ಪೊಲೀಸ್‌. ತಮಾಷೆಗಳನ್ನು ಪಕ್ಕಕ್ಕಿಟ್ಟು ನೋಡಬೇಕು, ಸೀರಿಯಸ್ಸಾಗಬೇಕು. ಅದಕ್ಕೇನು ಮಾಡಬೇಕು, ದ್ವಿತೀಯಾರ್ಧದಲ್ಲಿ ಪಾತ್ರ ಸೀರಿಯಸ್ಆಗುತ್ತದೆ. ಮೊದಲಾರ್ಧದ ಪಂಚಿಂಗ್ಡೈಲಾಗು, ತಮಾಷೆಗಳು ಸೆಕೆಂಡ್ಹಾಫ್ನಲ್ಲಿ ಬುಲೆಟ್ವೇಗದ ಭಾರೀ ಆಕ್ರೋಶದ ಸಂಭಾಷಣೆಗಳಾಗುತ್ತವೆ. ಅದಕ್ಕೆ ಡೈಲಾಗ್ಕಿಂಗ್ಸಾಯಿ ಕುಮಾರ್ಕೂಡ ಸೇರಿಕೊಳ್ಳುತ್ತಾರೆ. ಅಲ್ಲಿಗೆ ಮೊದಲಿಗೆ ಕಾಮಿಡಿ ಪರಮಾನ್ನ, ದ್ವಿತೀಯಾರ್ಧ ಸೆಂಟಿಮೆಂಟ್ಮೊಸರನ್ನ. ಒಟ್ಟಾರೆಯಾಗಿ ತೆಲುಗಿನಿಂದ ಕಡ ತಂದ ಕತೆಗೆ ಒಂಚೂರು ಇಲ್ಲಿನ ಉಪ್ಪು, ಹುಳಿ, ಖಾರ, ಮಾತು ಸೇರಿಸಿ ಚಿತ್ರಾನ್ನದ ಸಮಾರಾಧನೆ ನಡೆಯುತ್ತದೆ.ಇದನ್ನೆಲ್ಲಾ ತಿಂದವರಿಗೆ ಅಜೀರ್ಣವಾದರೂ ಇನ್ನೂ ಸುದ್ದಿ ಬಂದಿಲ್ಲ!

Pataki Kannada Movie review

ಚಿತ್ರ: ಪಟಾಕಿ

ತಾರಾಗಣ: ಗಣೇಶ್, ಸಾಯಿ'ಕುಮಾರ್, ರನ್ಯ,ಸಾಧು ಕೋಕಿಲ, ಅಶಿಷ್ ವಿದ್ಯಾರ್ಥಿ

ನಿರ್ದೇಶನ: ಮಂಜು ಸ್ವರಾಜ್

ನಿರ್ಮಾಣ: ಎಸ್.ವಿ. ಬಾಬು

ಸಂಗೀತ: ಅರ್ಜುನ್  ಜನ್ಯ

ಛಾಯಾಗ್ರಹಣ: ವೆಂಕಟೇಶ್ ಅಂಗರಾಜ್

ರೇಟಿಂಗ್:***

ಕ್ಲೋಸಪ್ ನಿಮ್ಮಂಥ ಪೊಲೀಸನ್ನ ನಾವು ಅಡ್ಗೆ ಮನೇಲಿ ಕೆಲಸಕ್ಕೆ ಇಟ್ಕೊಂಡಿದ್ದೀವಿ!
-ಹಾಗಂತ ‘ಪಟಾಕಿ' ಚಿತ್ರದಲ್ಲೊಂದು ಡೈಲಾಗ್‌ ಬರುತ್ತದೆ. ಹಾಗಂತ ಆ ಡೈಲಾಗನ್ನು ಗಣೇಶ್‌ ಅವರಿಗೆ ಹೇಳಿದ್ದು ಅಂತ ಅಂದುಕೊಳ್ಳುವಂತಿಲ್ಲ. ಕುರಿ ಪ್ರತಾಪ್‌ ಅವರಿಗೆ ಅನ್ವಯಿಸಿ ಹೇಳಿದ್ದು. ಹಾಗಂತ ಗಣೇಶ್‌ ಅವರ ಪೊಲೀಸ್‌ ಪಾತ್ರ ತೀರಾ ಸೀರಿಯಸ್ಸೇನಲ್ಲ. ಬಿಲ್ಡಪ್‌ಗಳು ಸಾಕಷ್ಟುಇದ್ದರೂ ಇಡೀ ಸಿನಿಮಾದಲ್ಲಿ ಹೆಚ್ಚಿಗೆ ಸೆಳೆಯುವುದು ಕಾಮಿಡಿ ಕಾರಣಕ್ಕೇ. ಸಿಕ್ಕಾಪಟ್ಟೆಡೈಲಾಗ್‌ ಹೊಡೆಯುತ್ತಾ, ಭ್ರಷ್ಟಾಚಾರವನ್ನೇ ಉಸಿರಾಡುತ್ತಾ, ಮೇಲಧಿಕಾರಿಗಳಿಗೆ ಟಾಂಗ್‌ ಕೊಡುತ್ತಾ, ಕೆಳಗಿರುವ ಅಧಿಕಾರಿಗಳಿಗೆ ಲಂಚಕ್ಕೆ ಪ್ರೇರೇಪಿಸುತ್ತಾ ಇರುವ ನಾಯಕ ಎಸಿಪಿ ಸೂರ್ಯ, ಸೀರಿಯಸ್ಸಾಗಿ ಪೊಲೀಸ್‌ ಅಧಿಕಾರಿಯ ಕೆಲಸ ಮಾಡು​ವವ​ನಲ್ಲ. ಅದರಲ್ಲೇ ಚಿತ್ರದ ಮೊದಲರ್ಧ ಕಳೆದು ಹೋಗುತ್ತದೆ. ಅಂದಹಾಗೆ ಇದು ತೆಲುಗಿನ ‘ಪಟಾಸ್‌'ನ ರೀಮೇಕ್‌.

ಏನೇ ಆದರೂ ಪೊಲೀಸ್‌ ಅಂದರೆ ಪೊಲೀಸ್‌. ತಮಾಷೆಗಳನ್ನು ಪಕ್ಕಕ್ಕಿಟ್ಟು ನೋಡಬೇಕು, ಸೀರಿಯ​ಸ್ಸಾಗಬೇಕು. ಅದಕ್ಕೇನು ಮಾಡಬೇಕು, ದ್ವಿತೀಯಾರ್ಧದಲ್ಲಿ ಪಾತ್ರ ಸೀರಿಯಸ್‌ ಆಗುತ್ತದೆ. ಮೊದಲಾರ್ಧದ ಪಂಚಿಂಗ್‌ ಡೈಲಾಗು, ತಮಾಷೆಗಳು ಸೆಕೆಂಡ್‌ ಹಾಫ್‌ನಲ್ಲಿ ಬುಲೆಟ್‌ವೇಗದ ಭಾರೀ ಆಕ್ರೋಶದ ಸಂಭಾಷಣೆಗಳಾಗುತ್ತವೆ. ಅದಕ್ಕೆ ಡೈಲಾಗ್‌ ಕಿಂಗ್‌ ಸಾಯಿ ಕುಮಾರ್‌ ಕೂಡ ಸೇರಿಕೊಳ್ಳುತ್ತಾರೆ. ಅಲ್ಲಿಗೆ ಮೊದಲಿಗೆ ಕಾಮಿಡಿ ಪರಮಾನ್ನ, ದ್ವಿತೀಯಾರ್ಧ ಸೆಂಟಿಮೆಂಟ್‌ ಮೊಸರನ್ನ. ಒಟ್ಟಾರೆಯಾಗಿ ತೆಲುಗಿನಿಂದ ಕಡ ತಂದ ಕತೆಗೆ ಒಂಚೂರು ಇಲ್ಲಿನ ಉಪ್ಪು, ಹುಳಿ, ಖಾರ, ಮಾತು ಸೇರಿಸಿ ಚಿತ್ರಾನ್ನದ ಸಮಾರಾಧನೆ ನಡೆಯುತ್ತದೆ.ಇದನ್ನೆಲ್ಲಾ ತಿಂದವರಿಗೆ ಅಜೀರ್ಣವಾದರೂ ಇನ್ನೂ ಸುದ್ದಿ ಬಂದಿಲ್ಲ!

ಮುದ್ದಾದ ಗಣೇಶ್‌ ಪೊಲೀಸ್‌ ದಿರಿಸಿನಲ್ಲಿ ಇನ್ನೂ ಮುದ್ದಾಗಿ ಕಾಣುತ್ತಾರೆ. ಅವರಂಥ ಲವ್ವರ್‌ ಬಾಯ್‌ಗೆ ಪೊಲೀಸ್‌ ಪಾತ್ರ ಒಪ್ಪತ್ತೋ ಬಿಡತ್ತೋ, ಪ್ರಶ್ನೆಯನ್ನು ಎತ್ತಿ ಪಕ್ಕಕ್ಕಿಡಿ. ಯಾವ ಸಂಭಾಷಣೆಯೇ ಆಗಲಿ, ಅವರಿಗೆ ಚೆನ್ನಾಗಿ ಒಪ್ಪತ್ತೆ. ಹಾಗಾಗಿ ‘ಪಟಾಕಿ'ಯನ್ನು ಮೆಚ್ಚಿಕೊಳ್ಳುವುದನ್ನು ಕಲಿಯಿರಿ. ಖಡಕ್‌ ಪೊಲೀಸ್‌ ಕತೆಯನ್ನು ಕಾಮಿಡಿ ಚಿತ್ರಕತೆಯ ಪೊಟ್ಟಣದಲ್ಲಿ ಕಟ್ಟಿಕೊಟ್ಟಈ ಕಾಮಿಡಿ ಟೈಮ್‌, ಉದ್ದಕ್ಕೂ ನಿಮ್ಮನ್ನು ಸುಮ್ಮನಿರಲು ಬಿಡುವುದಿಲ್ಲ. ಖಡಕ್ಕಾದ ಉದ್ದುದ್ದ ಡೈಲಾಗ್‌ಗಳನ್ನು ಎಷ್ಟೇ ಹೇಳುತ್ತಿದ್ದರೂ ಟೈಮಿಂಗ್‌ ಮಿಸ್‌ ಆಗುವುದಿಲ್ಲ, ಫೋರ್ಸು ಮಿಸ್‌ ಆಗುವುದಿಲ್ಲ. ಮೈಮೇಲೆ ಖಾಕಿ ಬೀಳಲಿ, ಆ್ಯಕ್ಷನ್‌ ದೃಶ್ಯಗಳೇನೇ ಇರಲಿ, ಹೆವಿ ಫೈಟಿಂಗ್‌ ಇರಲಿ, ನಾಲ್ಕೆಂಟು ಜನರನ್ನು ಒಂದೇ ಪೆಟ್ಟಿಗೆ ಆಕಾಶದಲ್ಲಿ ಹಾರಿಸಲಿ- ಏನಿದ್ದರೂ ಸೆಳೆಯುವ ವಿಷಯ ಒಂದೇ, ಗಣೇಶ್‌ ಮತ್ತು ಅವರ ಮಾತು. ಅವರಂಥ ಸಾಫ್ಟ್‌ ನಟನಿಗೆ ಆ್ಯಕ್ಷನ್‌ ಅನ್ನುವುದು ಕಾಮಿಡಿ ಆಗುವ ಅಪಾಯದಿಂದ ಅವರನ್ನು ಪಾರು ಮಾಡಿದ್ದೇ ಅವರ ಈ ವಾಕ್‌ಪ್ರತಿಭೆ.

ಗಣೇಶ್‌ ಅವರು ಹೇಳುವ ಡೈಲಾಗಿನಷ್ಟುಉದ್ದ ಏನಿಲ್ಲ ಕತೆ, ಸಿಂಪಲ್‌. ಒಬ್ಬ ಹುಡುಗ, ಆತ ಪೊಲೀಸನ ಮಗ. ಪೊಲೀಸ್‌ ಕರ್ತವ್ಯದ ನಿಮಿತ್ತ ಕುಟುಂಬವನ್ನು ನಿರ್ಲಕ್ಷಿಸಿದ, ಅಮ್ಮನ ಸಾವಿಗೆ ಕಾರಣನಾದ ಅಂತ ಮಗನಿಗೆ ಅಪ್ಪನ ಮೇಲೆ ದ್ವೇಷ. ಅಪ್ಪ ಅಗ್ನಿ (ಸಾಯಿಕುಮಾರ್‌) ಡಿಜಿಪಿ ಆದರೆ ಮಗ ಸೂರ್ಯ ಎಸಿಪಿ. ಅಪ್ಪ ಭ್ರಷ್ಟರಿಗೆ ಸಿಂಹಸ್ವಪ್ನವಾದರೆ ಮಗ ಭ್ರಷ್ಟರ ಪಾಳಯದಲ್ಲೇ ಕುಂತು ಭ್ರಷ್ಟಾಚಾರ ಮಾಡಬಲ್ಲ ಚಾಣಾಕ್ಷ. ಸಮಾಜಕ್ಕಲ್ಲ, ಸ್ವಂತಕ್ಕೆ ಪೊಲೀಸ್‌ ಅಧಿಕಾರ ಬಳಸಿಕೊಳ್ಳಿ ಅಂತ ದುರ್ಬೋಧನೆ ಮಾಡುವಂಥ ಡೈಲಾಗ್‌ ಕಿಂಗ್‌. ಇಂಥ ಕತೆಗೆ ಒಂದು ಫ್ಲಾಷ್‌ಬ್ಯಾಕ್‌. ಯಾವುದೋ ಒಂದು ಸಂದರ್ಭದಲ್ಲಿ ಡಿಜಿಪಿ ಮತ್ತು ಎಸಿಪಿ ಒಂದಾಗುತ್ತಾರೆ. ಭ್ರಷ್ಟರ ಪಾಲಿಗೆ ಈ ಡಬಲ್‌ ಸಿಂಹಗಳು ಸಿಂಹಸ್ವಪ್ನವಾಗುತ್ತಾರೆ. ಇಂಥ ಕತೆಯ ಮಧ್ಯೆ ಉಪ್ಪಿನಕಾಯಿಯಂತೆ ಅವನ ಪ್ರೇಮ, ಅವನ ತಂಗಿ ಸೆಂಟಿಮೆಂಟ್‌, ಕಾಮಿಡಿ, ಡೈಲಾಗ್‌ಗಳೂ ಸೇರಿವೆ. ಒಟ್ಟಿನಲ್ಲಿ ಕನ್ನಡದ ಪೊಟ್ಟಣದಲ್ಲಿ ಕಟ್ಟಿಟ್ಟತೆಲುಗು ಬಟಾಟೆಒಡೆಯಂತೆ ಗಣೇಶ್‌, ಥೇಟರ್‌ನಲ್ಲಿ ನಗೆಯ ಮೃಷ್ಠಾನ್ನ ಭೋಜನವನ್ನು ತಿನ್ನಿಸಿ ಖುಷಿಪಡಿಸುತ್ತಾರೆ.

ಸಾಯಿಕುಮಾರ್‌ ದ್ವಿತೀಯಾರ್ಧ ಸಿಡಿದೆದ್ದು ಹಳೆಯ ‘ಅಗ್ನಿ' ಖದರ್‌ ಮೆರೆದಿದ್ದಾರೆ. ನಾಯಕಿಯಾಗಿ ರನ್ಯ ತುಂಡುಡುಗೆಯಲ್ಲಿ ಸುಳಿದಾಡುವ ಐಸ್‌ಕ್ಯಾಂಡ್‌ಯಂತೆ ತಂಪಾಗುತ್ತಾ ಬಿಸಿಯೇರಿಸುತ್ತಾರೆ. ಮಂಗಳಮುಖಿಯಾಗಿ ಸಾಧು ಕೋಕಿಲಾ ಅವರದು ಕಾಮಿಡಿ, ಟ್ರಾಜಿಡಿ ಕಾಂಬೋ. ಆಶಿಷ್‌ ವಿದ್ಯಾರ್ಥಿ ಎಂದಿನಂತೆ ಖಳಪಡೆಯ ಒಡೆಯ. ಪ್ರಕಾಶ್‌ ಜಡೆಯ ಅವರ ಸಂಭಾಷಣೆ ಎಲ್ಲಾ ಥರದ ಒಳ್ಳೆಯ, ಕೆಟ್ಟರುಚಿಗಳನ್ನು ಹಿಡಿದಿಟ್ಟು ಶಿಳ್ಳೆಗೆ ಪಾತ್ರವಾಗುತ್ತದೆ. ಅರ್ಜುನ್‌ ಜನ್‌ ಸಂಗೀತದಲ್ಲಿ ವಿಶೇಷವಿಲ್ಲ. ಛಾಯಾಗ್ರಹಣದಲ್ಲಿ ಹೊಡೆದಾಟದ್ದೇ ಮೇಲಾಟ. ಕೊನೆ ಮಾತು: ಮಾವಿನಕಾಯಿ ಅಂದಾಕ್ಷಣ ಉಪ್ಪಿನ​ಕಾಯಿಯೇ ಮೊದಲು ನೆನಪಿಗೆ ಬರುವುದು. ಆದರೂ ಮಾವಿನಕಾಯಿಯಿಂದ ಬೇರೆ ಖಾದ್ಯಗಳನ್ನೂ ಮಾಡುತ್ತಾರೆ, ಆದರೆ ಅದು ಉಪ್ಪಿನಕಾಯಿಯಷ್ಟುರುಚಿಯಾಗಿರ ಬೇಕಾಗಿಲ್ಲ! 

ವಿಮರ್ಶೆ: ವಿಕಾಸ ನೇಗಿಲೋಣಿ

Follow Us:
Download App:
  • android
  • ios