Asianet Suvarna News Asianet Suvarna News

'ಮನಸು ಮಲ್ಲಿಗೆ' ವಿಮರ್ಶೆ: ಅದೇ ಮನಸು ಅದೇ ಹಾದಿ; ನಾರಾಯಣ್ ‘ಮೂಲ'ವಾದಿ!

ಹೇಳಿಕೇಳಿ ನಿರ್ದೇಶಕರು ಯಾವ ತೋಟದಲ್ಲಿ ಮಲ್ಲಿಗೆ ಬೆಳೆದರೂ ಅದರ ಪರಿಮಳ ನಮಗೂ ಸಿಗಲಿ ಅಂತ ಬಯಸುವವರು. ಅಂಥ ಇನ್ನೊಂದು ಮಲ್ಲಿಗೆ ಬಳ್ಳಿ ಈ ಸಲ ಕನ್ನಡಕ್ಕೆ ಹಬ್ಬಿದೆ. ಈ ಸಿನಿಮಾ ಅದ್ಭುತವಾಗಿದೆ ಅಂತ ನಾವು ಹೇಳಿದರೆ ನೀವು ಅದನ್ನು ಏಪ್ರಿಲ್‌ ಫೂಲ್‌ ಅಂತ ತಿಳಿಯಬಾರದಷ್ಟೇ!

manasu mallige movie review

ರೇಟಿಂಗ್‌ ***

ಚಿತ್ರ: ಮನಸು ಮಲ್ಲಿಗೆ
ನಿರ್ಮಾಣ: ರಾಕ್‌'ಲೈನ್‌ ವೆಂಕಟೇಶ್‌ ಮತ್ತು ಝಿ ಸ್ಟುಡಿಯೋ
ನಿರ್ದೇಶನ: ಎಸ್‌. ನಾರಾಯಣ್‌
ತಾರಾಗಣ: ನಿಶಾಂತ್‌, ರಿಂಕು ರಾಜಗುರು, ಅರವಿಂದ್‌, ಸೌರಭ್‌ ಕುಲಕರ್ಣಿ ಮತ್ತಿತರರು.
ಛಾಯಾಗ್ರಹಣ: ಮನೋಹರ್‌ ಜೋಷಿ
ಸಂಗೀತ: ಅಜಯ್‌- ಅತುಲ್‌

ಅಂತಸ್ತಿಗಿಂದ ಪ್ರೀತಿ ದೊಡ್ಡದು, ಅದು ವೇದಾಂತ. ಅದೆಲ್ಲಾ ಇಲ್ಲ, ಕೊನೆಗೂ ಅಂತಸ್ತೇ ದೊಡ್ಡದು, ಅದು ವಾಸ್ತವ.
-ಇದನ್ನೇ ಬಹುಶಃ ಮರಾಠಿ ನಿರ್ದೇಶಕ ನಾಗರಾಜ್‌ ಮಂಜುಳೆ ‘ಸಾಯಿರಾಟ್‌' ಸಿನಿಮಾದಲ್ಲಿ ಹೇಳಿದ್ದರು. ಇನ್ನೂ ಜಗತ್ತಿನ ಕ್ರೌರ್ಯ ಅರಿಯದ ಇಬ್ಬರು ಮುಗ್ದ ಪ್ರೇಮಿಗಳು, ಅವರಿಗೆ ಅಡ್ಡಿಯಾಗುವ ಅಂತಸ್ತು, ಅದನ್ನೂ ಮೀರಿ ಇಬ್ಬರೂ ಪ್ರೇಮವನ್ನೇ ಗೆಲ್ಲಿಸುವ ಪವಾಡ, ಅನಂತರ ಅವರಿಬ್ಬರ ಮಧ್ಯೆ ಎದುರಾಗುವ ಎಲ್ಲಾ ಅನುಮಾನ, ಬಿರುಕು, ಸರಸ, ವಿರಸ. ಕೊನೆಗೂ ಉಳಿವ ಪ್ರಶ್ನೆ, ಪ್ರೀತಿಯ ವಿರುದ್ಧ ಅಂತಸ್ತೇ ಗೆಲ್ಲುತ್ತದಾ!

ಕಬ್ಬಿನ ಗದ್ದೆಯ ನಡುವೆ ಅರಳಿದ ಆ ಮರಾಠಿ ನವಿರು ಪ್ರೇಮಕತೆಯನ್ನು ಕಲಾಸಾಮ್ರಾಟ್‌ ಎಸ್‌. ನಾರಾಯಣ್‌ ಯಥಾವತ್‌ ಕನ್ನಡಕ್ಕೆ ತಂದು, ಕಬ್ಬಿನಗದ್ದೆಯ ಮಧ್ಯೆಯೇ ಇಟ್ಟಿದ್ದಾರೆ. ಕನ್ನಡಪ್ರೇಮಿಗಳು ಕಬ್ಬಿನಗದ್ದೆ ನೋಡಿಕೊಳ್ಳುತ್ತಾ ‘ಕಬ್ಬಿಗರುದಿಸಿದ ಮಂಗಳಧಾಮ' ಅಂತ ಹಾಡಬಹುದು! ಮೂಲ ಚಿತ್ರದ ಥರದ ಗದ್ದೆ ಮಧ್ಯೆಯ ಬಾವಿಗೇ ಮತ್ತೊಮ್ಮೆ ಬಿದ್ದು ಒದ್ದೆಯಾಗಬಹುದು, ಮೂಲ ಹುಡುಗಿ ಇಲ್ಲಿ ಮತ್ತೊಮ್ಮೆ ಬೈಕ್‌ ಓಡಿಸುವುದನ್ನು ಕಣ್ತುಂಬಿಕೊಳ್ಳ­ಬಹುದು, ಅದೇ ಹಾಡುಗಳನ್ನು ಕನ್ನಡ ಪದಪುಂಜಗಳಲ್ಲಿ ಕಿವಿ ತುಂಬಿಸಿಕೊಳ್ಳಬಹುದು. ಕೊನೆಗೂ ಪ್ರೀತಿಯೇನು, ಹೊಸತಲ್ಲವಲ್ಲ, ಪ್ರೇಮಿಗಳು ಮಾತ್ರ ಹೊಸಬರು ತಾನೇ ಅಂತ ಫಿಲಾಸಫಿ ಹೇಳಿ ಬಚಾವಾಗಬಹುದು.

ಮೂಲ ಕತೆ ತುಂಬ ಇಷ್ಟವಾಗಿಬಿಟ್ಟಿರುವುದರಿಂದ ಮೂಲ ಸಂಗೀತವನ್ನೂ, ಮೂಲದ ನಾಯಕಿಯನ್ನೂ, ಮೂಲ ಕತೆ, ಚಿತ್ರಕತೆಯನ್ನೂ ನಾರಾಯಣ್‌ ಅವರು ಹಾಗೇ ಇಟ್ಟುಕೊಂಡಿದ್ದಾರೆ. ಅದಕ್ಕೋಸ್ಕರ ನಿರ್ದೇಶಕರಿಗೊಂದು ಥ್ಯಾಂಕ್ಸ್‌ ಹೇಳಿ. ಬದಲಾಗಿದ್ದು ಅಂದರೆ ಮುಖ್ಯವಾಗಿ ಕೆಲ ಕಲಾವಿದರು ಮತ್ತು ಚಿತ್ರದ ಭಾಷೆ. ಭಾಷೆ ಕೂಡ ಅದ್ಭುತವಾಗಿ ಬಳಕೆಯಾಗಿದೆ ಎಂದರೆ ತಮ್ಮ ಪಾತ್ರಕ್ಕೆ ತಾವೇ ಡಬ್‌ ಮಾಡಿರುವ ನಾಯಕಿಯ ಮಾತುಗಳನ್ನು ಕಣ್ಮುಚ್ಚಿ ಕೇಳಿಸಿಕೊಂಡರೆ ಸಾಕು, ಎಂಥ ಅದ್ಭುತ ಸಿನಿಮಾವನ್ನು ನಾರಾಯಣ್‌ ಕನ್ನಡದ ಮಡಿಲಿಗೆ ತಂದು ಮಲಗಿಸಿದ್ದಾರೆ ಅಂತ ಅರ್ಥವಾಗಿಬಿಡುತ್ತದೆ.

ಹಸಿರಾದ ಗದ್ದೆ, ತರಂಗ ತರಂಗಗಳನ್ನು ಎಬ್ಬಿಸುವ ಕೆರೆಗಳನ್ನು ಹಾರಾಡುವ ಡ್ರೋಣ್‌ ಕ್ಯಾಮರಾ ಮೂಲಕ ಮನೋಹರ್‌ ಜೋಷಿ ಅವರ ಕ್ಯಾಮರಾ ತೋರಿಸುತ್ತಾ ಹೋದ ಹಾಗೇ ಕತೆ ಬಿಚ್ಚಿಕೊಳ್ಳುಚ್ಚದೆ. ಸಂಜನಾ ಎಂಬ ಶ್ರೀಮಂತರ ಮನೆಯ ಹುಡುಗಿ ಬುಲೆಟ್‌ ಬೈಕ್‌ ಓಡಿಸಬಲ್ಲ, ಟ್ರ್ಯಾಕ್ಟರ್‌ ಓಡಿಸಬಲ್ಲ ಧೈರ್ಯವಂತೆ. ತೀರಾ ಬಡತನದಲ್ಲಿ ಇರುವ ಪರಶು, ಬುಲೆಟ್‌ರಾಣಿಯ ಮನಸ್ಸಲ್ಲಿ ಪ್ರೀತಿಯ ಒರತೆ ಉಕ್ಕಿಸುತ್ತಾನೆ. ಇಬ್ಬರೂ ಬಹಳ ಬೇಗ ಪ್ರೇಮದಲ್ಲಿ ಬೀಳುತ್ತಾರೆ, ಆ ಪ್ರೇಮ ಜನರ ಕಣ್ಣಿಗೂ ಬೀಳುತ್ತದೆ, ಶ್ರೀಮಂತರ ದರ್ಪ ಇವರಿಬ್ಬರ ಮೇಲೆ ಮುರಿದುಕೊಂಡು ಬೀಳುತ್ತದೆ. ಸ್ವಲ್ಪ ತಮಾಷೆ, ಸ್ವಲ್ಪ ರೊಮ್ಯಾನ್ಸ್‌, ದರ್ಪ, ಗೂಂಡಾಗಾರಿಕೆ, ವಾಸ್ತವ, ಸಮಾಜದ ಕ್ರೌರ್ಯಗಳನ್ನು ತುಂಬಿ ಕೊಟ್ಟಿರುವ ರಾಕ್‌ಲೈನ್‌ ಮತ್ತು ಝೀ ಸ್ಟುಡಿಯೋ ನಿರ್ಮಾಣದ ಈ ಚಿತ್ರ, ನವಿರಾಗಿದೆ. ಹಿತವಾದ ಹಿನ್ನೆಲೆ ಸಂಗೀತದಲ್ಲಿ ಕತೆಯನ್ನು ಕಟ್ಟಿಕೊಡುತ್ತಾ ಹೋಗಿದ್ದಾರೆ. ಒಂದು ಊರಿನ ಸಹಜ ಪಾತ್ರಗಳು, ಪ್ರೇಮ, ಕತೆ, ಹಿಂದೆ ಇರುವ ಗದ್ದೆ, ಮೇಲಿರೋ ಆಕಾಶ, ಅಲ್ಲಿ ಹಾರಾಡೋ ಗ್ರಾಫಿಕ್ಸ್‌ ಹಕ್ಕಿ ಪಕ್ಷಿಗಳು, ಓಡಾಡೋ ಜನ, ಮನೆ, ಮನೆತನಗಳು ನಮ್ಮವಾಗುತ್ತಾ ಹೋಗಿವೆ.

ನಾರಾಯಣ್‌ ಎಂಬ ಯಥಾವತ್‌ ಭಾಷಾಂತರಕಾರರ ಈ ಚಿತ್ರದಲ್ಲಿ ಮತ್ತೆ ಇಷ್ಟವಾಗುವುದು ನಾಯಕಿಯೇ. ಮೌನವಾಗಿ­ದ್ದಾಗೆಲ್ಲಾ ಅದ್ಭುತವಾಗಿ ಅಭಿನಯಿಸುವ ರಿಂಕು ರಾಜ್‌'ಗುರು, ಬಾಯ್ಬಿಟ್ಟಾಗಲೆಲ್ಲಾ ತಾವೂ ಕಷ್ಟಪಟ್ಟು, ಕೇಳುವವರಿಗೂ ಕಷ್ಟಕೊಟ್ಟಿದ್ದಾರೆ. ಹಾಗಿದ್ದೂ ಸಣ್ಣ ಸಣ್ಣ ಸನ್ನಿವೇಶಗಳಲ್ಲಿ ಅವರು ಕೊಡುವ ಎಕ್ಸ್‌'ಪ್ರೆಶನ್‌, ಪಾತ್ರವಾಗಿ ಆವರಿಸಿಕೊಳ್ಳುವ ಗುಣ- ಮೆಚ್ಚಿಕೊಳ್ಳಲೇಬೇಕು. ಹೀರೋ ಆಗಿ ಇಂಟ್ರಡ್ಯೂಸ್‌ ಆಗಿರುವ ನಿಶಾಂತ್‌ ಬಹಳಷ್ಟು ಸಲ ನಕ್ಕು, ಸುಮ್ಮನಿದ್ದು ಪಾತ್ರವನ್ನು ಜೀವಿಸಿ­ದ್ದಾರೆ. ಮೌನವಾಗಿ­ದ್ದಷ್ಟೂಮುಗ್ದ ಮಾನವ. ಇನ್ನುಳಿದ ಪಾತ್ರಗಳಿರುವುದು ಕಡಿಮೆಯೇ. ತಂದೆಯ ಪಾತ್ರದಲ್ಲಿ ಅರವಿಂದ್‌, ನಾಯಕಿಯ ತಮ್ಮನ ಪಾತ್ರದಲ್ಲಿ ಸೌರಭ್‌ ಕುಲಕರ್ಣಿ ಕೊಟ್ಟಷ್ಟನ್ನು ನಿರ್ವಹಿಸಿದ್ದಾರೆ. ಸ್ನೇಹಿತನಾಗಿ ಕಾಣಿಸಿಕೊಂಡಿದ್ದ ಮೂಲದ ತಾನಾಜಿ ಅವರೇ ಇಲ್ಲೂ ಚೆನ್ನಾಗಿ ಪಾತ್ರ ನಿರ್ವಹಿಸಿದ್ದಾರೆ.

ಹೇಳಿಕೇಳಿ ನಿರ್ದೇಶಕರು ಯಾವ ತೋಟದಲ್ಲಿ ಮಲ್ಲಿಗೆ ಬೆಳೆದರೂ ಅದರ ಪರಿಮಳ ನಮಗೂ ಸಿಗಲಿ ಅಂತ ಬಯಸುವವರು. ಅಂಥ ಇನ್ನೊಂದು ಮಲ್ಲಿಗೆ ಬಳ್ಳಿ ಈ ಸಲ ಕನ್ನಡಕ್ಕೆ ಹಬ್ಬಿದೆ.

ಈ ಸಿನಿಮಾ ಅದ್ಭುತವಾಗಿದೆ ಅಂತ ನಾವು ಹೇಳಿದರೆ ನೀವು ಅದನ್ನು ಏಪ್ರಿಲ್‌ ಫೂಲ್‌ ಅಂತ ತಿಳಿಯಬಾರದಷ್ಟೇ!

- ವಿಕಾಸ್ ನೇಗಿಲೋಣಿ, ಕನ್ನಡಪ್ರಭ
epaper.kannadaprabha.in

Follow Us:
Download App:
  • android
  • ios