Asianet Suvarna News Asianet Suvarna News

ರಾಜಕುಮಾರ v/s ಬಾಹುಬಲಿ: ಬಾಹುಬಲಿ 2 ಕಲಿಸಿದ ಪಾಠಗಳು

ಎರಡು ಸಿನಿಮಾಗಳು ಕನ್ನಡದ ಮಾರುಕಟ್ಟೆ ಚಿಕ್ಕದಲ್ಲ ಎಂದು ತೋರಿಸಿಕೊಟ್ಟವು. ರಾಜಕುಮಾರ ಕನ್ನಡ ಸಿನಿಮಾಗಳ ಆತ್ಮವಿಶ್ವಾಸ ಹೆಚ್ಚಿಸಿದರೆ, ಬಾಹುಬಲಿ-2 ಕರ್ನಾಟಕದ ಮಾರುಕಟ್ಟೆಯ ಅಗಾಧತೆಯನ್ನು ಚಿತ್ರೋದ್ಯಮಕ್ಕೆಪರಿಚಯಿಸಿತು. ಕನ್ನಡದಲ್ಲಿ ಅತ್ಯಂತ ಹೆಚ್ಚು ಮಂದಿ ವೀಕ್ಷಿಸಿದ ಚಿತ್ರ 'ರಾಜಕುಮಾರ' . ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚಿನ ಗಳಿಕೆ ಕಂಡದ್ದು 'ಬಾಹುಬಲಿ-2'. ಇವೆರಡೂ ದಾಖಲೆಯೇ    

Lessons Taught by Bahubali 2

ಬಾಹುಬಲಿ-2 ಚಿತ್ರದ ಗಳಿಕೆ ಸಾವಿರ ಕೋಟಿ ದಾಟಿದೆ ಎಂಬ ಸುದ್ದಿಯ ಬೆನ್ನಿಗೇ, ಅದು ಕರ್ನಾಟಕದಲ್ಲಿ ಗಳಿಸಿದ್ದೆಷ್ಟುಅನ್ನುವುದನ್ನು ಕೇಳಿಕೊಳ್ಳಬೇಕಾಗಿದೆ. ಕರ್ನಾಟಕದಲ್ಲಿ ಬಾಹುಬಲಿ-2 ಚಿತ್ರವನ್ನು ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಹಠ ಹಿಡಿದವರು, ಹೋರಾಟಕ್ಕೆ ಬೆಂಬಲ ಸೂಚಿಸಿದವರು, ಕನ್ನಡ ಪ್ರೇಮಿಗಳು ನಾವು ಎಂದು ಫೇಸ್‌ಬುಕ್ಕಿನಲ್ಲಿ ಕೂಗಾಡಿದವರು, ಬಾಹುಬಲಿ ಬಂದರೂ ನೋಡುವುದಿಲ್ಲ ಎಂದ ಹೇಳಿದವರು, ನಮಗೆ ಡಬ್ಬಿಂಗ್‌ ಸಿನಿಮಾ ಬೇಕು ಅಂದವರು, ಬಾಹುಬಲಿ ಒಂದು ಕೆಟ್ಟಕತೆ ಎಂದು ದೂರಿದವರು- ಇವರೆಲ್ಲರ ನಡುವೆಯೇ ಬಾಹುಬಲಿ-2 ಬೆಂಗಳೂರು ಒಂದರಲ್ಲೇ ನಲವತ್ತು ಕೋಟಿ ರುಪಾಯಿ ಗಳಿಕೆ ಕಂಡಿದೆ ಎಂಬ ಸುದ್ದಿಯಿದೆ. ಹೆಚ್ಚು ಕಡಿಮೆ ಅಷ್ಟೇ ಮೊತ್ತವನ್ನು ಬಾಹುಬಲಿ -2 ಕರ್ನಾಟಕದ ಇತರೆಡೆಗಳಲ್ಲಿ ಗಳಿಸಿರುವ ಸಾಧ್ಯತೆಯಿದೆ.

ಬಾಹುಬಲಿ ಚಿತ್ರದ ಕಾರ್ಯನಿರ್ವಾಹಕ ನಿರ್ಮಾಪಕ ಸುರೇಂದ್ರ ಅವರ ಪ್ರಕಾರ ಬೆಂಗಳೂರಿನಂದ ನಿರ್ಮಾಪಕರಿಗೆ ಬಂದಿರುವ ಶೇರು 20 ಕೋಟಿ ರುಪಾಯಿ ದಾಟಿದೆ. ಹೊರಗಿನ ಪ್ರದೇಶಗಳಿಂದ ಬಂದ ಮೊತ್ತದ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ಎಲ್ಲಾ ಊರುಗಳಿಂದ ಇನ್ನೂ ಡೇಲಿ ಕಲೆಕ್ಷನ್‌ ರಿಪೋರ್ಟು ಬಂದಿಲ್ಲ. ಈ ವಾರಾಂತ್ಯದ ಹೊತ್ತಿಗೆ ಸ್ಪಷ್ಟಚಿತ್ರಣ ಸಿಗುತ್ತದೆ. ಕರ್ನಾಟಕದ ಇತರ ಪ್ರದೇಶಗಳಲ್ಲಿರುವ ಚಿತ್ರಮಂದಿರಗಳು ಎಷ್ಟುಮನರಂಜನಾ ತೆರಿಗೆ ಕಟ್ಟಿದ್ದಾರೆ ಅನ್ನುವುದರ ಲೆಕ್ಕದ ಮೇಲೆ ಗಳಿಕೆಯನ್ನು ಲೆಕ್ಕ ಹಾಕಬೇಕಾಗಿದೆ. ಸದ್ಯಕ್ಕಂತೂ ಅದರ ಬಗ್ಗೆ ಏನೂ ಹೇಳಲಾಗುವುದಿಲ್ಲ ಅನ್ನುತ್ತಾರೆ ಸುರೇಂದ್ರ. ಆದರೆ ಮೂಲಗಳ ಪ್ರಕಾರ ಬೆಂಗಳೂರಿನಲ್ಲಿ ಗಳಿಸಿದಷ್ಟೇ ಮೊತ್ತವನ್ನು ಬೆಂಗಳೂರಿನ ಆಚೆಗೂ ಬಾಹುಬಲಿ ಕೂಡಿಹಾಕಿದೆ.

ಬಾಹುಬಲಿಯ ಈ ಗಳಿಕೆಗೆ ನಮ್ಮ ಮುಖ್ಯಮಂತ್ರಿಗಳ ಸಿಂಗಾಪೂರ್‌ ಪ್ರಯಾಣ ಕೂಡ ಕಾರಣವಾಯಿತೆಂದೇ ಹೇಳಬೇಕು. ಮಲ್ಟಿಪ್ಲೆಕ್ಸುಗಳ ಪ್ರವೇಶದರದ ಗರಿಷ್ಠಮಿತಿಯನ್ನು ನಾಲ್ಕುದಿನಗಳ ಮಟ್ಟಿಗೆ ವಿಸ್ತರಿಸಿದ್ದು ಬಾಹುಬಲಿಯ ಪಾಲಿಗೆ ವರದಾನವಾಯಿತು. ಒಂದು ವೇಳೆ ಅದೇನಾದರೂ ಆಗದೇ ಹೋಗಿದ್ದರೆ, ಬಹುಶಃ ಈಗಿರುವ ಗಳಿಕೆಯ ಅರ್ಧದಷ್ಟನ್ನು ಮಾತ್ರ ಚಿತ್ರ ಗಳಿಸುತ್ತಿತ್ತು ಅನ್ನುವುದೂ ನಿಜವೇ. ಆದರೆ ವಿಳಂಬದಿಂದ ಬಾಹುಬಲಿ ಲಾಭ ಪಡೆಯಿತು.

ಬಾಹುಬಲಿ-2 ಚಿತ್ರದ ಪ್ರಚಾರಕ್ಕೆ ಕನ್ನಡ ಹೋರಾಟಗಾರರು ಪರೋಕ್ಷವಾಗಿ ನೆರವಾದರು. ಚಿತ್ರ ಬಿಡುಗಡೆಯಾಗುವ ಎರಡು ವಾರಗಳ ಹಿಂದಿನಿಂದಲೇ ಚಿತ್ರದ ಕುರಿತು ಎಲ್ಲಾ ಮಾಧ್ಯಮಗಳಲ್ಲೂ ವರದಿಗಳು ಬರುವಂತೆ ನೋಡಿಕೊಂಡರು. ಬಾಹುಬಲಿ-1 ಚಿತ್ರ ಬಿಡುಗಡೆಯಾದಾಗ, ಅದನ್ನು ತಡೆದದ್ದು ಕೂಡ ಒಂದು ರೀತಿಯಲ್ಲಿ ಚಿತ್ರಕ್ಕೆ ಪ್ರಚಾರವೇ ಆಯಿತು. ನೋಡಕೂಡದು ಎಂಬ ಆಜ್ಞೆಗಳು ಕಟ್ಟಾದೇಶಗಳು ಪರೋಕ್ಷವಾಗಿ ನೋಡಲೇಬೇಕು ಎಂಬ ಆಸೆಯನ್ನು ಹುರಿದುಂಬಿಸಿದವು. ಮೊದಲ ಬಾರಿಗೆ ಚಿತ್ರಬಿಡುಗಡೆಯ ಮುನ್ನಾದಿನ ಒಂಬತ್ತೂವರೆಗೇ ಚಿತ್ರದ ಪ್ರದರ್ಶನ ಕರ್ನಾಟಕದಾದ್ಯಂತ ನಡೆಯಿತು. ಅದೂ ತೆಲುಗು ಚಿತ್ರವೊಂದಕ್ಕೆ ಕನ್ನಡಿಗರು ಕೋರಿದ ಕೆಂಪುಹಾಸಿನ ಸ್ವಾಗತ!

ಇವೆಲ್ಲವನ್ನೂ ಕನ್ನಡ ಚಿತ್ರರಂಗ ನಕಾರಾತ್ಮಕವಾಗಿ ತೆಗೆದುಕೊಳ್ಳಬೇಕಾಗಿಲ್ಲ. ಇದು ಒಂದು ಅರ್ಥದಲ್ಲಿ ಕನ್ನಡದ ಭರವಸೆಯನ್ನು ಚಿಗುರಿಸಿದ ಸಂದರ್ಭವೂ ಹೌದು. ಕನ್ನಡ ಮಾರುಕಟ್ಟೆಯ ಸಾಧ್ಯತೆ ಎಷ್ಟುಅನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಇದೊಂದು ಒಳ್ಳೆಯ ಅವಕಾಶ ಆಯಿತೆಂದೇ ಹೇಳಬೇಕು. ಒಂದು ಕಡೆ ರಾಜಕುಮಾರ ಚಿತ್ರ ಎಲ್ಲ ಹಳೆಯ ದಾಖಲೆಗಳನ್ನು ಮುರಿದು, ಕರ್ನಾಟಕದ ಮಟ್ಟಿಗೆ ಬಾಹುಬಲಿ-2 ಚಿತ್ರದ ಗಳಿಕೆಯ ದಾಖಲೆಯನ್ನೂ ಮುರಿದಿದೆ. ಬಾಹುಬಲಿ-2 ಹದಿನೈದು ಗಳಿಸಿದ್ದನ್ನು ರಾಜಕುಮಾರ ಐವತ್ತು ದಿನಗಳಲ್ಲಿ ಗಳಿಸಿರಬಹುದು. ಆದರೆ ಕನ್ನಡದ ಮಾರುಕಟ್ಟೆಮತ್ತ ಮನಸ್ಸು ಎರಡೂ ಜೀವಂತವಾಗಿದೆ ಅನ್ನುವುದನ್ನು ಚಿತ್ರರಂಗ ಅರ್ಥಮಾಡಿಕೊಳ್ಳಲಿಕ್ಕೆ ಈ ಸಂದರ್ಭ ನೆರವಾಯಿತೆಂದೇ ಹೇಳಬೇಕು.

ಬಾಹುಬಲಿ-2 ಚಿತ್ರದಿಂದ ನಾವು ಕಲಿಯಬೇಕಾದ ಪಾಠ ಸಾಕಷ್ಟಿದೆ. ಬಾಹುಬಲಿ ಕನ್ನಡದಲ್ಲಿ ಡಬ್‌ ಆಗಿ ಬಂದಿರುತ್ತಿದ್ದರೆ ಇದೇ ಪ್ರಮಾಣದ ಗಳಿಕೆ ಕಾಣುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಕೇವಲ ಡಬ್‌ ಆದ ವರ್ಷನ್‌ ಮಾತ್ರ ಕನ್ನಡದಲ್ಲಿ ಬಿಡುಗಡೆ ಆಗಿದ್ದರೆ ಏನಾಗುತ್ತಿತ್ತು ಅನ್ನುವುದನ್ನು ಯೋಚಿಸಲಿಕ್ಕೆ ಇದು ಸಕಾಲ. ಸಣ್ಣಪುಟ್ಟಸಿನಿಮಾಗಳು ಡಬ್‌ ಆಗುವುದಕ್ಕೂ ಬಾಹುಬಲಿ-2ನಂಥ ಸಿನಿಮಾ ಡಬ್‌ ಆಗುವುದಕ್ಕೂ ವ್ಯತ್ಯಾಸವಿದೆ ಅನ್ನುವುದಂತೂ ಸತ್ಯ. ಈ ಹಿನ್ನೆಲೆಯಲ್ಲಿ ಡಬ್ಬಿಂಗ್‌ ಕುರಿತಾದ ಚಿಂತನೆಯನ್ನು ಬದಲಾಯಿಸಿಕೊಳ್ಳಬೇಕಾದ ಅವಶ್ಯಕತೆಯನ್ನೂ ನಾವು ಮನಗಾಣಬಹುದು.

ಬಾಹುಬಲಿ-2ನಂಥ ವಿಸ್ತಾರವಾದ ಸಿನಿಮಾ ಮಾಡಲು ಕನ್ನಡದ ಪುಟ್ಟಮಾರುಕಟ್ಟೆಯಿಂದ ಸಾಧ್ಯವಾಗದೇ ಹೋಗಬಹುದು. ಮಯೂರ ಚಿತ್ರ ನಿರ್ಮಾಣವಾದಾಗ ಖರ್ಚಾದದ್ದು 35 ಲಕ್ಷ ರುಪಾಯಿ. ಅದು ಇಲ್ಲಿಯ ತನಕ ಗಳಿಸಿದ್ದು 53 ಲಕ್ಷ ರುಪಾಯಿ. ಮಯೂರ ಬಿಡುಗಡೆಯಾಗುವಾಗ ಅಕ್ಕಪಕ್ಕದ ಚಿತ್ರಮಂದಿರಗಳಲ್ಲಿ ತೆಲುಗು ತಮಿಳು ಸೂಪರ್‌ಸ್ಟಾರುಗಳ ಸಿನಿಮಾ ಕೂಡ ಬಿಡುಗಡೆಯಾಗಿತ್ತು. ಹೀಗಾಗಿ ಮಯೂರ ಪರಭಾಷಾ ಚಿತ್ರಗಳ ಜತೆಗೇ ಹೋರಾಡಿ ಗೆಲ್ಲಬೇಕಾಗಿತ್ತು ಎನ್ನುತ್ತಾರೆ ಕೆಸಿಎನ್‌ ಚಂದ್ರಶೇಖರ್‌. ಆ ಕಾಲಕ್ಕೆ ಹೋಲಿಸಿದರೆ ಈ ಕಾಲದ ಪರಿಸ್ಥಿತಿಯೇ ವಾಸಿಯೇನೋ!

ಹೀಗಾಗಿ ಬಾಹುಬಲಿ-2 ಮೊದಲು ಮತ್ತು ಬಾಹುಬಲಿ-2 ನಂತರ- ಎಂದೇ ಭಾರತೀಯ ಚಿತ್ರೋದ್ಯಮದ ಮಾರುಕಟ್ಟೆಯನ್ನೂ ಕನ್ನಡ ಚಿತ್ರೋದ್ಯಮದ ಮಾರುಕಟ್ಟೆಯನ್ನೂ ನಾವು ನೋಡಬೇಕಾಗಿದೆ. ಅದೃಷ್ಟವಶಾತ್‌, ನಮಗೆ ಕೀಳರಿಮೆ ಹುಟ್ಟದಂತೆ ಮಾಡುವುದಕ್ಕೆ ನಮ್ಮದೇ ಆದ ರಾಜಕುಮಾರ ಚಿತ್ರ ನಮ್ಮೊಂದಿಗಿದೆ.

-ಜೋಗಿ, ಕನ್ನಡಪ್ರಭ

Follow Us:
Download App:
  • android
  • ios