Asianet Suvarna News Asianet Suvarna News

ಲೀಯಲ್ಲಿದೆ ನೋಡುವಂಥದ್ದು ಅಲ್ಲಿ ಇಲ್ಲಿ

ಚಿತ್ರವನ್ನು ಯಾಕೆ ಮಾಡಿದ್ದಾರೆಂಬುದು ಸ್ವತಃ ನಿರ್ದೇಶಕ ಶ್ರೀನಂದನ್ಅವರಿಗೇ ಗೊತ್ತಿಲ್ಲ ಅನಿಸುತ್ತದೆ. ಇದ್ದಕ್ಕಿದಂತೆ ಯಾವುದೋ ಕತೆ ಶುರುವಾಗಿ, ಮತ್ತೆ ಅದು ಗೊಂದಲದಲ್ಲೇ ಮುಗಿದು ಮತ್ತೊಂದು ಗೊಂದಲದ ತಿರುವು ಶುರುವಾಗುತ್ತದೆ. ಯಡವಟ್ಟು ವಿರಾಮದ ನಂತರವಾದರೂ ಸರಿ ಹೋಗುತ್ತದೆ ಅಂದುಕೊಂಡರೆ ಊಹಂ... ಅದೂ ಇಲ್ಲ. ಸಿನಿಮಾ ಮುಗಿಯುವುದೇ ಇಂಥ ಗೊಂದಲಗಳ ಗೂಡಿನಲ್ಲೇ.

Lee Kannada Movie Review

ಭಾಷೆ: ಕನ್ನಡ

ತಾರಾಗಣ: ಸುಮಂತ್‌ ಶೈಲೇಂದ್ರ, ನಭಾ ನಟೇಶ್‌, ಸ್ನೇಹಾ, ಅಚ್ಯುತ್‌ ಕುಮಾರ್‌, ಸುಚೇಂದ್ರ ಪ್ರಸಾದ್‌, ಚಿಕ್ಕಣ್ಣ, ರಾಹುಲ್‌ ದೇವ್‌, ರಂಗಾಯಣ ರಘು

ನಿರ್ದೇಶನ: ಶ್ರೀನಂದನ್‌

ನಿರ್ಮಾಣ: ಸಾರಥಿ ಸತೀಶ್‌, ದರ್ಶನ್‌ ಕೃಷ್ಣ, ಎಸ್‌ ಬಿ ವಿನಯ್‌

ಸಂಗೀತ: ಗುರುಕಿರಣ್‌, ಆನಂದ್‌ ವಿಕ್ರಮ್‌

ಛಾಯಾಗ್ರಾಹಣ: ನಂದಕುಮಾರ್‌

ಸುಮಂತ್  ಶೈಲೇಂದ್ರ ನಟಿಸಿರುವ ‘ಲೀ' ಚಿತ್ರ ಹೇಗಿದೆ? ಎನ್ನುವುದಕ್ಕೆ ನಾಯಿ, ಕತ್ತೆ, ಕುರಿಗಳೇ ಉತ್ತರಿಸುತ್ತವೆ. ಪ್ರಾಣಿಗಳಿಗೂ ‘ಲೀ'ಗೂ ಏನ್‌ ಸಂಬಂಧ ಎನ್ನುವ ಕುತೂಹಲ ಬೇಡ. ಯಾಕೆಂದರೆ ಚಿತ್ರದ ನಾಯಕನ ಫ್ಲ್ಯಾಷ್‌ ಬ್ಯಾಕ್‌ ಹೇಳುವುದೇ ಇದೇ ನಾಯಿ, ಕತ್ತೆ ಮತ್ತು ಕುರಿ. ಸುಮ್ಮನೆ ಒಂದಿಷ್ಟುದೃಶ್ಯಗಳು, ಆ ದೃಶ್ಯಗಳಿಗೆ ಪೂರಕವಲ್ಲದಿದ್ದರೂ ವಿದೇಶಿ ತಾಣಗಳು, ಕಲಾವಿದರ ದಂಡು ಇದ್ದರೆ ಸಾಕು ಸಿನಿಮಾ ಮಾಡಬಹುದು ಎಂದುಕೊಂಡರೆ ಎಂಥ ಸಿನಿಮಾ ಮಾಡಬಹುದು ಎಂಬುದಕ್ಕೆ ‘ಲೀ' ಅತ್ಯುತ್ತಮ ಉದಾಹರಣೆ.

ಈ ಚಿತ್ರವನ್ನು ಯಾಕೆ ಮಾಡಿದ್ದಾರೆಂಬುದು ಸ್ವತಃ ನಿರ್ದೇಶಕ ಶ್ರೀನಂದನ್‌ ಅವರಿಗೇ ಗೊತ್ತಿಲ್ಲ ಅನಿಸುತ್ತದೆ. ಇದ್ದಕ್ಕಿದಂತೆ ಯಾವುದೋ ಕತೆ ಶುರುವಾಗಿ, ಮತ್ತೆ ಅದು ಗೊಂದಲದಲ್ಲೇ ಮುಗಿದು ಮತ್ತೊಂದು ಗೊಂದಲದ ತಿರುವು ಶುರುವಾಗುತ್ತದೆ. ಈ ಯಡವಟ್ಟು ವಿರಾಮದ ನಂತರವಾದರೂ ಸರಿ ಹೋಗುತ್ತದೆ ಅಂದುಕೊಂಡರೆ ಊಹಂ... ಅದೂ ಇಲ್ಲ. ಸಿನಿಮಾ ಮುಗಿಯುವುದೇ ಇಂಥ ಗೊಂದಲಗಳ ಗೂಡಿನಲ್ಲೇ.
ಸಿನಿಮಾ ಬಿಡುಗಡೆಗೂ ಮುನ್ನ ಮಾರ್ಷಲ್‌ ಆರ್ಟ್‌, ಕುಂಗ್'ಫೂ, ಕರಾಟೆ... ಹೀಗೆ ಏನೇನೊ ಹೇಳಿದರು. ಆದರೆ, ಯಾವುದೋ ತೆರೆ ಮೇಲೆ ಕಾಣಲಿಲ್ಲ. ಇಷ್ಟಕ್ಕೂ ಚಿತ್ರದ ನಾಯಕನಿಗೆ ಮಾತ್ರವಲ್ಲ ಚಿತ್ರದ ಯಾವ ಪಾತ್ರಕ್ಕೂ ಹಿನ್ನೆಲೆ ಇಲ್ಲ. ಹಿನ್ನೆಲೆ ಇಲ್ಲದ ಇಂಥ ಸಿನಿಮಾಗೆ ಆರಂಭವೂ ಇಲ್ಲ, ಅಂತ್ಯವೂ ಇಲ್ಲ. ಚಿತ್ರದಲ್ಲಿ ಮುಕ್ಕಾಲು ಪಾಲು ನಾಯಕ ಅರೆಹುಚ್ಚನಾಗಿರುತ್ತಾನೆ. ಆದರೆ, ಉಳಿದ ಪಾತ್ರಗಳೂ ಅಬ್‌ನಾರ್ಮಲ್‌ ಆಗಿಯೇ ಕಾಣುತ್ತವೆ. ಅದರಲ್ಲೂ ವಿಲನ್‌ ಗ್ಯಾಂಗ್‌ನ ಯಾವೊಬ್ಬ ಸದಸ್ಯನೂ ಮನುಷ್ಯನ ರೀತಿಯ ಕಾಣಲ್ಲ. ಹೀಗಾಗಿ ನಿರ್ದೇಶಕರಿಗೆ ಕಲಾವಿದರ ಮೇಲೆ ಯಾಕಿಂಥ ಸಿಟ್ಟು? ಎಂದು ಪ್ರೇಕ್ಷಕನೇ ಪ್ರಶ್ನಿಸಿಕೊಳ್ಳುತ್ತಾನೆ. ಒಂದು ಪ್ರೀತಿ. ಆ ಪ್ರೀತಿಯ ಜೋಡಿಯದ್ದು ಧರ್ಮ ಬೇರೆ. ನಾಯಕ ಕ್ರಿಶ್ಚಿಯನ್‌, ನಾಯಕಿ ಹಿಂದು ಧರ್ಮ. ಹಾಗಾದರೆ ಇದು ಧರ್ಮಗಳ ನಡುವಿನ ಪ್ರೇಮ ಕತೆಯಾ? ಎಂದುಕೊಳ್ಳುವ ಹೊತ್ತಿಗೆ ಮಾಫಿಯಾ ಆರಂಭವಾಗುತ್ತದೆ. ಬೆಗ್ಗರ್‌ ಮಾಫಿಯಾ, ವಿದೇಶಗಳಿಗೆ ಹೆಣ್ಣು ಮಕ್ಕಳನ್ನು ಸಾಗಿಸುವ ಗ್ಯಾಂಗ್‌, ಇದರ ಹಿಂದೆ ಅಡಗಿರುವ ಶೇಕ್‌... ಹೀಗೆ ಎಲ್ಲವೂ ತಲೆಬುಡ ಇಲ್ಲದೆ ತೆರೆದುಕೊಳ್ಳುತ್ತದೆ. 
ಜಾಳು ಜಾಳು ನಿರೂಪಣೆ, ಕತೆಯಲ್ಲೇ ಸ್ಪಷ್ಟತೆ ಇಲ್ಲದಿರುವುದು, ‘ಹಾಲ್‌ ಮಾರ್ಕ್ ಚಿನ್ನ ಹಾಕಿಕೊಂಡು ಓಡಾಡಬೇಕಾದವಳು, ಹಲ್ಲು ಮಾರ್ಕ್ ಹಾಕೊಂಡಿದ್ದಿಯಲ್ಲಮ್ಮ' ಎನ್ನುವ ಒಂದು ಡೈಲಾಗ್‌ ಬಿಟ್ಟರೆ ಇಡೀ ಸಿನಿಮಾದಲ್ಲಿ ಕಿವಿಗೆ ಮಾಲಿನ್ಯ ಉಂಟು ಮಾಡುವ ಸಂಭಾಷಣೆಗಳು, ಜೀವಂತಿಕೆ ಇಲ್ಲದ ಪಾತ್ರಗಳಿಂದ ಸಿನಿಮಾ ಆರಂಭದಲ್ಲೇ ತೂಕಡಿಸುತ್ತದೆ. ಇದ್ದುದ್ದರಲ್ಲಿ ಸುಮಂತ್‌ ಶೈಲೇಂದ್ರ ಸಾಹಸ ದೃಶ್ಯಗಳಲ್ಲಿ ಮೆಚ್ಚುಗೆಯಾಗುತ್ತಾರೆ ಅಷ್ಟೆ. ಉಳಿದಂತೆ ಯಾವ ಪಾತ್ರಗಳು ಕತೆಗೆ ಪೂಕರವಾಗಿಲ್ಲ. ಸಿನಿಮಾ ತಾಂತ್ರಿಕತೆಯ ಬಗ್ಗೆ ಹೇಳುವುದೇ ಬೇಡ.ನಿರ್ಮಾಪಕರು ಹಾಡುಗಳಿಗೆ ಅದ್ಧೂರಿಯಾಗಿ ಖರ್ಚು ಮಾಡಿದಂತೆ ಎಂಥ ಕತೆಗೆ ಬಂಡವಾಳ ಹಾಕಬೇಕು ಎನ್ನುವ ಯೋಚನೆ ಮಾಡುವ ಅಗತ್ಯವೂ ಇತ್ತು. 

Follow Us:
Download App:
  • android
  • ios