Asianet Suvarna News Asianet Suvarna News

ಆ್ಯಕ್ಷನ್ ಕಿಂಗ್ ಅಕೌಂಟ್'ನಲ್ಲಿ 150 ಸಿನಿಮಾ

ನಟ ಅರ್ಜುನ್‌ ಸರ್ಜಾ ಅಭಿನಯದ ಆ್ಯಕ್ಷನ್‌ ಹಾಗೂ ಥ್ರಿಲ್ಲರ್‌ ಚಿತ್ರ ‘ವಿಸ್ಮಯ' ತೆರೆ ಕಾಣಲು ರೆಡಿಯಾಗಿದೆ. ಇದು ಅವರ 150ನೇ ಚಿತ್ರ. ನಟನೊಬ್ಬನ ಪಾಲಿಗೆ ಇದು ದೊಡ್ಡ ಸಂಖ್ಯೆಯೇ ಸೈ. ಕನ್ನಡದ ಮೂಲಕ ತಮಿಳು, ತೆಲುಗಿನಲ್ಲೂ ಮಿಂಚಿರುವ ಅರ್ಜುನ್‌ ಸರ್ಜಾ 150 ಸಿನಿಮಾಗಳ ಜರ್ನಿಯಲ್ಲಿ ಸೋಲು-ಗೆಲುವು ಎರಡನ್ನೂ ಕಂಡ ನಟ. ಆ ಜರ್ನಿ ಕುರಿತು ಒಂದು ಸಣ್ಣ ಮಾತುಕತೆ.

Interview Of Arjun Sarja

1) 150ರವರೆಗಿನ ಈ ಜರ್ನಿ ಹೇಗನಿಸುತ್ತೆ?

ಏನೂ ಅನಿಸುತ್ತಿಲ್ಲ. 150 ನನ್ನ ದೃಷ್ಟಿಯಲ್ಲಿ ಸಂಖ್ಯೆ ಮಾತ್ರ. ಯಾಕಂದ್ರೆ ಎಷ್ಟೋ ನಟ-ನಟಿಯರೂ ಮುನ್ನೂರು, ನಾನೂರು ಸಿನಿಮಾ ಮಾಡಿದ್ದಾರೆ. ನಾವು ಈ ಲಿಸ್ಟ್‌ನಲ್ಲಿ ಯಾವ ರೀತಿಯ ಸಿನಿಮಾ ಮಾಡಿದ್ದೇವೆ, ಅದು ಜನರ ಮೇಲೆ ಹೇಗೆ ಪರಿಣಾಮ ಬೀರಿದೆ ಅನ್ನೋದು ಮುಖ್ಯ. 

2) ಈ ಜರ್ನಿಯಲ್ಲಿ ನಟನಾಗಿ ಪಡೆದ ಅನುಭವ?

1981ರಲ್ಲಿ ‘ಸಿಂಹದ ಮರಿಸೈನ್ಯ'ಯಿಂದ ಶುರುವಾದ ಜರ್ನಿ ಇದು. ಸಾಕಷ್ಟುಜನ ತಂತ್ರಜ್ಞರ ಜತೆಗೆ ಕೆಲಸ ಮಾಡಿದ್ದೇನೆ. ಪ್ರಮುಖವಾಗಿ ಇಲ್ಲಿ ಹೇಗಿರಬೇಕು, ಹೇಗಿರಬಾರದು ಎನ್ನುವು​ದನ್ನು ಕಲಿತುಕೊಂಡೆ. ದುಡ್ಡು, ಜನಗಳ ಪ್ರೀತಿ ಗಳಿಸಿದ್ದೇನೆ. ಮನಸ್ಸಿಗೆ ಖುಷಿ ನೀಡುವ ಸಿನಿಮಾ ಮಾಡಿದ್ದೇನೆ. ಕಮರ್ಷಿಯಲ್‌ ಜೊತೆ ದೇಶಾಭಿಮಾನ ಮೂಡಿಸುವ ಸಿನಿಮಾ ಮಾಡಿದ್ದೇನೆ. ಯಾರೇ ನೋಡಿದ್ರೂ ಜೈ ಹಿಂದ್‌ ಎನ್ನುತ್ತಾರೆ. ಸಾಕಲ್ಲ?

3) ನಿಮ್ಮ ಈ ಬಾಡಿ, ಎನರ್ಜಿಯ ಗುಟ್ಟೇನು?

ಅಂಥ ಗುಟ್ಟೇನೂ ಇಲ್ಲ. ಅದೊಂದು ಥರ ಭಯ. ಜನ್ರು ನಮ್ಮನ್ನು ಸಿನಿಮಾದಲ್ಲಿ ನೋಡ್ತಾರೆ. ಅವರ ಕಣ್ಣಲ್ಲಿ ನಾವು ಗಟ್ಟಿಮುಟ್ಟಾಗಿ ಕಾಣಬೇಕು. ಅವರಿಗೆ ಇಷ್ಟಆಗುವ ಹಾಗಿರಬೇಕು. ಸ್ಮಾರ್ಟ್‌ ಆಗಿರಬೇಕು. ಅದು ಅವರ ನಿರೀಕ್ಷೆ. ಆ ಭಯವೇ ನನ್ನ ಈ ಜರ್ನಿಗೆ ಕಾರಣ. ಅದೇ ನನ್ನ ಲೈಫ್‌ ಸ್ಟೈಲ್‌ ಆಗಿಬಿಟ್ಟಿದೆ. ಈಗಲೂ ಪ್ರತಿ ದಿನ ಒಂದು ಗಂಟೆ ಜಿಮ್‌, ವ್ಯಾಯಾಮ ಕಾಯಂ.

4) ಈ ಸ್ಮಾರ್ಟ್‌ ಆ್ಯಂಡ್‌ ಫಿಟ್‌ ಬದ್ಧತೆ ಬಂದಿದ್ದು ಯಾಕೆ?

ಅದು ನನ್ನ ತಂದೆ ಕಲಿಸಿದ ಪಾಠ. ‘ಸಿಂಹದ ಮರಿ ಸೈನ್ಯ' ಟೈಮ್‌ನಲ್ಲಿ ತಂದೆ ಒಂದು ಮಾತು ಹೇಳಿದ್ದರು. ಪ್ರೇಕ್ಷಕರನ್ನು ರಂಜಿಸುವುದು ಕಲಾವಿದನ ಕರ್ತವ್ಯ. ಅದಕ್ಕೆ ಬದ್ಧನಾಗಿದ್ದಾಗಲೇ ಕಲೆ ದಕ್ಕುತ್ತದೆ ಅಂತ. ಅದು ನನ್ನ ಮನಸ್ಸಲ್ಲಿ ಹಾಗೆಯೇ ಉಳಿಯಿತು. ಅದೇ ನನ್ನನ್ನು ಯಂಗ್‌ ಆ್ಯಂಡ್‌ ಎನರ್ಜಿಟಿಕ್‌ ಆಗಿರುವಂತೆ ಮಾಡಿದೆ. ಆ ರೆಸ್ಪಾನ್ಸಿಬಿಲಿಟಿಯನ್ನು ಹೊತ್ತುಕೊಂಡೇ ಬಂದಿದ್ದೇನೆ. ಅದು ಭಾರ ಎನಿಸಿದ್ದರೂ, ಸ್ವಲ್ಪ ದೂರ ನಡೆದು ಹಿಂತಿರುಗಿ ನೋಡಿದಾಗ ಖುಷಿ ಕೊಡುತ್ತೆ. 

5) ಸ್ಟಾರ್‌ ನಟನ 100, 150ನೇ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಇದ್ದೇ ಇರುತ್ತದಲ್ವಾ?

ನನ್ನ ದೃಷ್ಟಿಯಲ್ಲಿ ಪ್ರತಿ ಸಿನಿಮಾವೂ ಮುಖ್ಯ. ಗೊತ್ತೋ ಗೊತ್ತಿಲ್ಲದೆಯೋ ‘ವಿಸ್ಮಯ' 150ನೇ ಸಿನಿಮಾ ಆಗಿದೆ. ಪ್ರತಿ ಸಿನಿಮಾ ಮಾಡುವಾಗ ಮಾಡುವ ಸಿದ್ಧತೆ, ಎಚ್ಚರಿಕೆ ಹಾಗೂ ಪ್ರೀತಿ ಈ ಚಿತ್ರಕ್ಕೂ ಇದೆ. ಫೈಟ್ಸ್‌, ಮ್ಯೂಜಿಕ್‌, ಥ್ರಿಲ್ಲರ್‌, ಆ್ಯಕ್ಷನ್‌ ಜತೆಗೆ ಟೆಕ್ನಿಕಲಿ ಅದ್ಭುತವಾಗಿದೆ. ದೊಡ್ಡ ಮಟ್ಟದಲ್ಲಿ ಹಿಟ್‌ ಆಗುತ್ತದೆ. 

6) ಸೋತಾಗ ನೋವಾಗಿದೆಯಾ? 

ನಾನು ಯಾವತ್ತೂ ಫ್ಲಾಪ್‌ ಆ್ಯಂಡ್‌ ಹಿಟ್‌ ಬಗ್ಗೆ ಯೋಚಿಸಿಲ್ಲ. ಒಂದು ಚಿತ್ರದ ಸೋಲು-ಗೆಲುವು ಯಾರೋ ಒಬ್ಬರ ಕೈಯಲ್ಲಿರುವುದಿಲ್ಲ. ನನ್ನ ಪಾಲಿನ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಮುಗಿಸಿದಾಗ ದುಃಖ ಪಡುವುದು, ನೊಂದುಕೊಳ್ಳುವುದರಲ್ಲಿ ಅರ್ಥವಿಲ್ಲ.

7) ಮಗಳು ಹಾಗೂ ಅಳಿಯರ ಸಿನಿಮಾ ಜರ್ನಿ ಬಗ್ಗೆ ಏನು ಹೇಳುತ್ತೀರಿ?

ಮಗಳು ಈಗಷ್ಟೇ ಸಿನಿಮಾಕ್ಕೆ ಎಂಟ್ರಿ ಆಗಿದ್ದಾಳೆ. ಚಿರು, ಧ್ರುವ ಈಗಾಗಲೇ ಪ್ರೇಕ್ಷಕರಿಗೆ ಪರಿಚಯವಾಗಿದ್ದಾರೆ. ಅವರವರ ಬೆಳವಣಿಗೆ ಶ್ರದ್ಧೆ ಮತ್ತು ಪರಿಶ್ರಮವನ್ನು ನಂಬಿಕೊಂಡಿದೆ. ಯಾರೋ ಕಲಾವಿದರ ಮಕ್ಕಳು ಎನ್ನುವ ಕಾರಣಕ್ಕೆ ಬೆಳೆದು ಬಿಡುವುದಿಲ್ಲ. 

-ದೇಶಾದ್ರಿ ಹೊಸ್ಮನೆ, ಕನ್ನಡಪ್ರಭ

Follow Us:
Download App:
  • android
  • ios