Asianet Suvarna News Asianet Suvarna News

ಜಿಮ್‌ಪ್ರಿಯರು ಏಕೆ ಚಿಕನ್ ಸೇವಿಸಬೇಕು?

‘ವ್ಯಾಯಾಮವು ರಾಜನಿದ್ದಂತೆ, ಪೌಷ್ಟಿಕಾಂಶವು ರಾಣಿಯಿದ್ದಂತೆ. ಇವೆರಡೂ ಒಗ್ಗೂಡಿದರಷ್ಟೇ ಸುಂದರ ರಾಜ್ಯವಾಗುತ್ತದೆ’

gym people must eat the chicken

ಆರೋಗ್ಯ ಎಲ್ಲಿದೆ ಎಂಬ ಯುವ ಜನಾಂಗದ ಸರಳ ಪ್ರಶ್ನೆಗೆ ವೈದ್ಯರು ಹೇಳುವುದಿಷ್ಟು; ಶೇ.70 ಅಡುಗೆ ಮನೆಯಲ್ಲಿ, ಮಿಕ್ಕ ಶೇ.30 ಜಿಮ್‌ನಲ್ಲಿ! ಆದರೆ, ಈಗ ಬಹುತೇಕರು ಈ ಲೆಕ್ಕಾಚಾರ ತಪ್ಪಿ ನಡೆಯುತ್ತಿದ್ದಾರೆ. ಶೇ.30ರಷ್ಟು ಫಿಟ್ನಸ್‌ಗೆ ಆದ್ಯತೆ ಕೊಡುವವರು ಆಹಾರಕ್ರಮಗಳಲ್ಲಿ ಎಡವುತ್ತಿರುವುದನ್ನು ಕಾಣುತ್ತಲೇ ಇದ್ದೇವೆ. ಈ ಹೊತ್ತಿನಲ್ಲಿ ಅಮೆರಿಕದ ಹೆಸರಾಂತ ಫಿಟ್ನೆಸ್ ತಜ್ಞ ಜ್ಯಾಕ್ ಲಲಾನ್ನೆ ಅವರ ಮಾತು ನೆನಪಾಗುತ್ತದೆ. ‘ವ್ಯಾಯಾಮವು ರಾಜನಿದ್ದಂತೆ, ಪೌಷ್ಟಿಕಾಂಶವು ರಾಣಿಯಿದ್ದಂತೆ. ಇವೆರಡೂ ಒಗ್ಗೂಡಿದರಷ್ಟೇ ಸುಂದರ ರಾಜ್ಯವಾಗುತ್ತದೆ’ ಎಂಬ ಈ ಮಾತಿನಲ್ಲೇ ನಮ್ಮ ಆರೋಗ್ಯದ ಗುಟ್ಟೂ ಅಡಗಿದೆ.

ಎಂಥ ಆಹಾರ ಬೇಕು?

ವ್ಯಾಯಾಮ ಮಾಡುವ ದೇಹಕ್ಕೆ ಪ್ರೊಟೀನ್ ಮುಖ್ಯವಾಗಿ ಬೇಕು. ಆದರೆ ಕಾರ್ಬೊಹೈಡ್ರೇಟ್ ಮತ್ತು ಕೊಬ್ಬಿಗಿಂತ ಭಿನ್ನವಾಗಿ, ನಮ್ಮ ದೇಹವು ಪ್ರೊಟೀನ್ ಅನ್ನು ದಾಸ್ತಾನು ಮಾಡುವುದಿಲ್ಲ. ದೇಹದಲ್ಲಿ ಪ್ರೊಟೀನ್ ಕಡಿಮೆಯಾದಾಗ, ಅದನ್ನು ಹೀರಿಕೊಂಡು ಸಮದೂಗಿಸಿಕೊಳ್ಳಲು ದೇಹದಲ್ಲಿ ಸೂಕ್ತ ಟ್ಯಾಂಕುಗಳೇ ಇಲ್ಲ. ಆಹಾರದ ಮೂಲಕವೇ ಹೆಚ್ಚು ಪ್ರಮಾಣದ ಪ್ರೊಟೀನ್ ಪೂರೈಕೆ ಆಗಬೇಕು. ದೇಹದ ಪ್ರತಿ ಕೋಶಕ್ಕೂ ಪ್ರೊಟೀನ್ ಬಹುಮುಖ್ಯ ಅಂಗಾಂಶ. ನಮ್ಮ ಕೂದಲು ಮತ್ತು ಉಗುರುಗಳೂ ಪ್ರೊಟೀನ್‌ಗಳಿಂದಲೇ ಸಂರಚಿತವಾಗಿವೆ. ಜೀವಕೋಶಗಳನ್ನು ರಚಿಸಿ, ರಿಪೇರಿ ಮಾಡಲು ಪ್ರೊಟೀನ್‌ಗಳು ಬೇಕು. ಮೂಳೆಗಳು, ಮೃದ್ವಸ್ಥಿ, ಸ್ನಾಯುಗಳು ಮತ್ತು ರಕ್ತಕ್ಕೂ ಇದೇ ಮೂಲವಸ್ತು.

ಸ್ನಾಯುಗಳಿಗೆ ಪ್ರೊಟೀನ್

ವ್ಯಾಯಾಮದಿಂದ ಸ್ನಾಯುಗಳಲ್ಲಿನ ಪ್ರೊಟೀನ್ ಕರಗುತ್ತದೆ. ಪ್ರತಿ ಊಟದಿಂದಲೂ ನಮಗೆ ಕನಿಷ್ಠ 20 ಗ್ರಾಂ ಉನ್ನತ ಗುಣಮಟ್ಟದ ಪ್ರೊಟೀನ್ ಲಭ್ಯವಾಗಬೇಕು. ಹೀಗೆ ಸಿಕ್ಕ ಪ್ರೊಟೀನ್‌ಗಳು ಸ್ನಾಯುವನ್ನು ತಲುಪಿ ಆ ಜಾಗವನ್ನು ಇನ್ನಷ್ಟು ಬಲಗೊಳ್ಳುವಂತೆ ಮಾಡುತ್ತದೆ. ಅಮೈನೊ ಆಮ್ಲಗಳು ಪ್ರೊಟೀನ್‌ನ ಮೂಲವಸ್ತುಗಳು. ಸ್ನಾಯುಗಳನ್ನು ಬಲವರ್ಧನೆಗೊಳಿಸಲು 20 ಅಮೈನೊ ಆಮ್ಲಗಳು ಬಹುಮುಖ್ಯವಾಗಿ ಬೇಕು. ಅದರಲ್ಲಿ ‘ಲ್ಯುಸೈನ್’ ಬಹಳ ಪ್ರಮುಖ. ಒಂದು ಹೊತ್ತಿನ ಚಿಕನ್ ಊಟದಲ್ಲಿ ನಮಗೆ ಲಭ್ಯವಾಗುವುದು 2 ಗ್ರಾಂ ಲ್ಯುಸೈನ್!

ಯಾಕೆ ಚಿಕನ್ ಸೇವಿಸಬೇಕು?

ಜಿಮ್‌ನಲ್ಲಿ ಮೈ ಹುರಿಗೊಳಿಸುವವರಿಗೆ ಚಿಕನ್ ಒಳ್ಳೆಯ ಪೌಷ್ಟಿಕ ಆಹಾರ. ಅದರಲ್ಲೂ ಕೋಳಿಯ ಎದೆಯಲ್ಲಿ ಅಕ ಪ್ರೊಟೀನ್ ಅಡಗಿರುತ್ತದೆ. ಅಲ್ಲಿ ಕೊಬ್ಬು ಕೂಡ ಕಡಿಮೆ ಇರುವುದರಿಂದ, ನಮ್ಮ ಸ್ನಾಯುಗಳಿಗೆ ಲಾಭವೇ ಆಗಲಿದೆ. ಅರ್ಧ ತೂಗುವ ಚಿಕನ್ ಬ್ರೆಸ್ಟ್‌ನಿಂದ ನಮಗೆ 8 ಗ್ರಾಮ್ ಪ್ರೊಟೀನ್ ಸಿಗುತ್ತದೆ. ಅತಿ ಕಡಿಮೆ ಪ್ರಮಾಣದಲ್ಲಿ ಕೊಬ್ಬು ಲಭ್ಯವಾಗುತ್ತದೆ. ಇದರಲ್ಲಿ ವಿಟಮಿನ್ ಬಿ6 ಕೂಡ ಅಕವಿರುತ್ತದೆ. ವ್ಯಾಯಾಮ ಮಾಡುವಾಗ ಸ್ನಾಯುಗಳಲ್ಲಿನ ಕಾರ್ಬೊಹೈಡ್ರೇಟ್ ದಾಸ್ತಾನನ್ನು ಬಳಸಿಕೊಳ್ಳಲು ಇದು ನೆರವಾಗುತ್ತದೆ. ಇದರಲ್ಲಿ ನಯಾಸಿನ್, ಕಬ್ಬಿಣಾಂಶ, ಸೆಲೇನಿಯಂ ಮತ್ತು ಸತು ಕೂಡ ಇದ್ದು, ಇವು ರೋಗನಿರೋಧಕ ಶಕ್ತಿ ಮತ್ತು ಜೀವಕೋಶಗಳ ದುರಸ್ತಿಗೆ ಸಹಾಯಕ. ಚಿಕನ್ ಖಾದ್ಯಗಳನ್ನು ಆದಷ್ಟು ಬೆಂಕಿಯಲ್ಲಿ ಸುಟ್ಟು ಅಥವಾ ಹಬೆಯಲ್ಲಿ ಬೇಯಿಸಿ ಸೇವಿಸುವುದು ಉತ್ತಮ. ನಮ್ಮ ದೈನಂದಿನ ಪ್ರೊಟೀನ್ ಅವಶ್ಯಕತೆಗಳನ್ನು ಪೂರೈಸಲು ಚಿಕನ್ ಅದ್ಭುತ ಆಹಾರ. ಜಿಮ್‌ಪ್ರಿಯರಿಗೆ ‘70:30’ರ ಆರೋಗ್ಯವೂ ಸುಲಭವಾಗಿ ಸಿಗುತ್ತದೆ.

- ಡಾ. ವಲ್ಲಾರಿ ಶಾ