Asianet Suvarna News Asianet Suvarna News

'ಅಲ್ಲಮ' ಚಿತ್ರವಿಮರ್ಶೆ: ಬಯಲು ಚಿತ್ರಮಂದಿರದೊಳಗೆ

ನಿರೂಪಣೆಯಲ್ಲಿ ಕೊಂಚ ರೋಚಕತೆ ಜತೆಗೆ ಸಿನಿಮ್ಯಾಟಿಕ್‌ ತಂತ್ರವನ್ನು ಅನುಸರಿಸಿದ್ದರೆ ಇನ್ನಷ್ಟು ಆಸಕ್ತಿದಾಯಕವಾಗಿ ನೋಡಿಸಿಕೊಳ್ಳುವ ಗುಣವನ್ನು ಚಿತ್ರಕ್ಕೆ ದಕ್ಕುತ್ತಿತ್ತೇನೋ? ಒಮ್ಮೆ ನೋಡಲು ‘ಅಲ್ಲಮ' ಅಡ್ಡಿ ಇಲ್ಲ. 

allama kannada movie review

ಚಿತ್ರ: ಅಲ್ಲಮ
ರೇಟಿಂಗ್: ***

ಭಾಷೆ: ಕನ್ನಡ
ತಾರಾಗಣ: ಧನಂಜಯ, ಮೇಘನಾ ರಾಜ್‌, ಸಂಚಾರಿ ವಿಜಯ್‌, ಲಕ್ಷ್ಮೀ ಗೋಪಾಲಸ್ವಾಮಿ, ರಮೇಶ್‌ ಪಂಡಿತ್‌, ರಾಮಕೃಷ್ಣ
ನಿರ್ದೇಶನ: ಟಿ ಎಸ್‌ ನಾಗಾಭರಣ
ನಿರ್ಮಾಣ: ಶ್ರೀಹರಿ ಎಲ್‌ ಖೋಡೆ
ಸಂಗೀತ: ಬಾಪು ಪದ್ಮನಾಭ್‌
ಛಾಯಾಗ್ರಾಹಣ: ಜಿ ಎಸ್‌ ಭಾಸ್ಕರ್‌

ಚರಿತ್ರೆಯ ಪುಟಗಳಲ್ಲಿ ಅಡಗಿರುವ ಐತಿಹಾಸಿಕ ವ್ಯಕ್ತಿಗಳು, ಸಾಮಾಜಿಕ ಸುಧಾರಕರು, ದಾರ್ಶನಿಕರ ಕುರಿತು ಸಿನಿಮಾ ಮಾಡುವುದು ಎಂದರೆ ಅದು ಕತ್ತಿ ಮೇಲಿನ ನಡಿಗೆ. ಯಾಕೆಂದರೆ ಚರಿತ್ರೆಯನ್ನು ಎಲ್ಲ ಕಾಲಕ್ಕೂ, ಎಲ್ಲ ಸಂದರ್ಭಗಳಿಗೂ ಸರಿ ಅಂತ ಒಪ್ಪಿಕೊಳ್ಳಲಾಗದೆಂಬ ವಾದವಿದೆ. ಆದರೂ ಅಂಥ ನಡಿಗೆಯ ಅಪಾಯವನ್ನು ಅರಿತು ಸಾಧ್ಯವಾದಷ್ಟುಚರಿತ್ರೆಯ ಪುಟಗಳನ್ನು ತೆರೆದಿಡುವ ಸಾಹಸ ಸಿನಿಮಾಗಳಿಂದ ಆಗುತ್ತಿದೆ. ‘ಅಲ್ಲಮ' ಅಂಥ ಪ್ರಯೋಗಾತ್ಮಕ ಹಾಗೂ ಈ ಕಾಲಕ್ಕೂ ಸಲ್ಲುವಂತಹ ಕತೆ ಎಂಬುದನ್ನು ಟಿ ಎಸ್‌ ನಾಗಾಭರಣ ಸೋಗಸಾಗಿ ಹೇಳಿದ್ದಾರೆ. ವಾಸ್ತವಿಕತೆಯನ್ನು ಯಾವುದೇ ಅಡಂಬರವಿಲ್ಲದೆ ಹೇಳಬೇಕು ಎನ್ನುವುದು ಒಪ್ಪುವಂತಹದ್ದಾದರೂ ಯಾವುದೇ ಕತೆಗೆ ತೆರೆ ಮೇಲೆ ಸಿನಿಮ್ಯಾಟಿಕ್‌ ಬಣ್ಣ ಬೇಡುವ ದಿನಗಳಿವು ಎಂಬುದನ್ನು ನಿರ್ದೇಶಕರು ಗಮನ ಕೊಡಬೇಕಿತ್ತು.

ಇದರ ಆಚೆಗೂ ಅಲ್ಲಮ ಹೇಗಿದ್ದರೋ ಹಾಗೆ ಹೇಳುವ ಪ್ರಯತ್ನ ಪಟ್ಟಿದ್ದಾರೆ ನಿರ್ದೇಶಕರು. ಈ ಕ್ಷಣಕ್ಕೂ ಅಲ್ಲಮನ ಸಂದೇಶಗಳು ಪ್ರಸ್ತುತ ಎಂಬುದನ್ನು ಸಿನಿಮಾ ನೋಡಿ ತಿಳಿಯಬೇಕು. ಇಲ್ಲಿ ಬರುವ ಮಾಯೆಯ ಜತೆಗಿನ ಮಾತುಕತೆಯನ್ನೇ ನೋಡಿ. ಆತ ಎಲ್ಲವನ್ನೂ ತೊರೆಯುವುದೇ ಜೀವನ ಎನ್ನುತ್ತಾನೆ. ಆಕೆ ಇದ್ದಷ್ಟುಕಾಲ ಎಲ್ಲವನ್ನೂ ಮನಸಾರೆ ಅನುಭವಿಸಬೇಕು ಅನ್ನುತ್ತಾಳೆ. ದೇಹವೆಂಬುದು ಬರೀ ಕೊಳೆಯುವ ಮಾಂಸದ ಮುದ್ದೆ ಎನ್ನುವ ಭಾವನೆ ಆತನದ್ದು. ದೇಹಕ್ಕೆ ಮಿಲನವೇ ಪ್ರಧಾನ ಅನ್ನುತ್ತಾಳೆ. ಇಲ್ಲಿ ಆಕೆಯದ್ದು ಬಹಿರಂಗದ ಮಾತು. ಆತನದ್ದು ಅಂತರಂಗದ ನುಡಿಮುತ್ತು. ಅಲ್ಲಮ ಮತ್ತು ಮಾಯೆಯ ಈ ಮಾತುಗಳು ದಾಖಲಾಗಿ ದಶಕಗಳೇ ಕಳೆದು ಹೋಗಿವೆ. ಆದರೂ ಮಾಯೆಯ ಬಹಿರಂಗ ಸೌಂದರ್ಯ, ಅಲ್ಲಮನ ಅಂತರಂಗದ ಶುದ್ಧಿಯ ಈಗಲೂ ಪ್ರಸ್ತುತ. ಮಾಯೆ ಎಂಬ ನಮ್ಮೊಳಗಿನ ಆಸೆಯನ್ನು ದಹಿಸಬೇಕು. ಅದು ಜೀವನದ ಪರಮ ಮೋಕ್ಷ ಎನ್ನುವ ಅಲ್ಲಮನ ಮಾತು ಆಸೆಗಳ ಬೆನ್ನತ್ತಿ ‘ನನ್ನದು' ಎನ್ನುವ ಕೋಟೆ ಕಟ್ಟಿಕೊಂಡಿರುವ ನಾವು ಅದನ್ನು ಮಾಯೆಯಂತೆ ಒಡೆದು ಬಯಲಿನಲ್ಲಿ ನಿಲ್ಲಬೇಕೆಂಬ ಅಲ್ಲಮನ ಸಂದೇಶವನ್ನು ಅದ್ಭುತವಾಗಿ ತೆರೆ ಮೇಲಿಟ್ಟಿದ್ದಾರೆ ನಿರ್ದೇಶಕರು. 

ಹನ್ನೆರಡನೆಯ ಶತಮಾನದ ಅಲ್ಲಮ ಪ್ರಭುವಿನ ಬಾಲ್ಯ, ಗುರುಕುಲ ಪ್ರವೇಶ, ಬಸವ ಕಲ್ಯಾಣ, ರಾಜರ ಅಧಿಕಾರ, ತಾಯಿಯ ಹುಡುಕಾಟ, ಗುರಿ ಸಾಧನೆ, ಮಾಯೆಯ ಜತೆ ಆಟ ಹೀಗೆ ಎಲ್ಲವನ್ನು ಹೇಳುತ್ತಲೇ ಅಲ್ಲಮನನ್ನು ಬಟಾಬಯಲಿನಲ್ಲಿ ನಿಲ್ಲಿಸುತ್ತಾರೆ ನಿರ್ದೇಶಕರು. ಕ್ಲೈಮ್ಯಾಕ್ಸ್‌ ಹಂತದಲ್ಲಿ ನೋಡುಗನಿಗೆ ಅಲ್ಲಮನನ್ನೇ ಕಂಡಷ್ಟುಅನುಭವ ಆಗುವುದು ಆ ದೃಶ್ಯಕ್ಕೆ ನಿರ್ದೇಶಕರು ಬಳಸಿರುವ ಹಿನ್ನೆಲೆ. ‘ಒಬ್ಬ ಕರ್ಷಿಯಲ್‌ ಹೀರೋ ಇಂಥ ಸಿನಿಮಾಗಳಲ್ಲಿ ನಟಿಸುವುದಕ್ಕೆ ಸಾಧ್ಯವೆ?' ಎನ್ನುವ ಅನುಮಾನ ಇದ್ದವರನ್ನೂ ಅಚ್ಚರಿಗೊಳಿಸುವಂತೆ ಧನಂಜಯ, ತಾನೇ ಅಲ್ಲಮನಾಗಿದ್ದಾರೆ. ಇಡೀ ಚಿತ್ರವನ್ನು ಅಲ್ಲಮನಾಗಿ ಅವರು ನಿಭಾಯಿಸಿರುವ ರೀತಿಗೆ ಮೆಚ್ಚುವಂತಹದ್ದು. ನಟನೆಯಲ್ಲಿ ಅಲ್ಲಮನ ವಚನಗಳಷ್ಟೆ ಮಾಗಿದಂತೆ ಪಕ್ವವಾಗಿರುವ ಈ ಕಲಾವಿದ ಎಂಥ ಪಾತ್ರಕ್ಕೂ ಸೂಕ್ತ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಮಾಯೆ ಪಾತ್ರದಲ್ಲಿ ಅಲ್ಲಮನಿಗೆ ತಾನೇ ಸರಿಸಾಟಿ ಎನ್ನುವಂತೆ ಮೇಘನಾ ರಾಜ್‌ ಅವರ ಪಾತ್ರ ಪೋಷಣೆ. ಉಳಿದಂತೆ ಸಂಚಾರಿ ವಿಜಯ್‌, ಲಕ್ಷ್ಮೀ ಗೋಪಾಲ ಸ್ವಾಮಿ, ರಾಮಕೃಷ್ಣ ಪಾತ್ರಗಳು ನೆನಪಿನಲ್ಲಿ ಉಳಿಯುತ್ತವೆ. 

ಶರಣ ಸಂಸ್ಕೃತಿಯ ಅಲ್ಲಮ ಪ್ರಭುಗಳನ್ನು ಇಲ್ಲಿವರೆಗೂ ಬೇರೆ ಬೇರೆಯರು ಅವರದ್ದೇ ಯೋಚನೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಒಬ್ಬೊಬ್ಬರಿಗೂ ಒಂದೊಂದು ರೀತಿಯಲ್ಲಿ ಅಲ್ಲಮ ದಕ್ಕಿದ್ದಾನೆ. ಬಹುಶಃ ನಿರ್ದೇಶಕರಿಗೆ ಇದೇ ಸವಾಲಾಗಿರಬೇಕು. ಈ ಸವಾಲನ್ನು ನಿಭಾಯಿಸುವುದಕ್ಕೆ ಅವರು ವಚನಗಳ ಮೊರೆ ಹೋಗುತ್ತಾರೆ. ಅಲ್ಲಮನ ವಚನಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಆತನ ಬಯಲಿನ ಬೆರಗನ್ನು ಹೇಳಿದ್ದಾರೆ ನಾಗಾಭರಣ. ಹೀಗಾಗಿ ಬಾಪು ಪದ್ಮನಾಭ್‌ ಅವರ ಸಂಗೀತದಲ್ಲಿ ಚಿತ್ರದ ಉದ್ದಕ್ಕೂ ವಚನಗಳು ನೋಡುಗನ ಸನಿಹವಾಗುತ್ತವೆ. ನಿರೂಪಣೆಯಲ್ಲಿ ಕೊಂಚ ರೋಚಕತೆ ಜತೆಗೆ ಸಿನಿಮ್ಯಾಟಿಕ್‌ ತಂತ್ರವನ್ನು ಅನುಸರಿಸಿದ್ದರೆ ಇನ್ನಷ್ಟು ಆಸಕ್ತಿದಾಯಕವಾಗಿ ನೋಡಿಸಿಕೊಳ್ಳುವ ಗುಣವನ್ನು ಚಿತ್ರಕ್ಕೆ ದಕ್ಕುತ್ತಿತ್ತೇನೋ? ಇನ್ನು ತೆರೆ ಹಿಂದೆ ಇಡೀ ಚಿತ್ರವನ್ನು ಒಂದು ಹಂತಕ್ಕೆ ತೆಗೆದುಕೊಂಡು ಹೋಗಿರುವುದು ಶಶಿಧರ ಅಡಪ ಅವರ ಕಲಾ ನಿರ್ದೇಶನ, ಜಿ ಎಸ್‌ ಭಾಸ್ಕರ್‌ ಅವರ ಕ್ಯಾಮೆರಾ ಕಣ್ಣು. ಎಲ್ಲೂ ಅಧುನಿಕತೆಯ ನೆರಳು ಸೋಕದಂತೆ ಎಚ್ಚರ ವಹಿಸುವ ಅಡಪ ಅವರ ಕಲೆಗೆ ಭಾಸ್ಕರ್‌ ಅವರ ಕ್ಯಾಮೆರಾದ ನೆರಳು- ಬೆಳಕು ಸಾಥ್‌ ನೀಡುತ್ತದೆ. ಅಲ್ಲಮನ ಬಾಲ್ಯದ ಪ್ರದೇಶವನ್ನು ಕಟ್ಟಿಕೊಡುವಾಗಿನ ಅವರ ಕ್ಯಾಮೆರಾ ಕಣ್ಣು, ಬಸವ ಕಲ್ಯಾಣಕ್ಕೆ ಬರುವ ಹೊತ್ತಿಗೆ ಬದಲಾಗುತ್ತದೆ. ಮನೆಯೊಳಗಿನ ದೃಶ್ಯಗಳು ತೆರೆದುಕೊಳ್ಳುವಾಗ ನೆರಳಿನ ಜತೆ ಸನಿಹವಾಗುವ ಮಂದ ಬೆಳಕಿನಂದಲೇ ದೃಶ್ಯಗಳ ತೂಕ ಹೆಚ್ಚಿಸುತ್ತಾರೆ ಭಾಸ್ಕರ್‌. ಒಮ್ಮೆ ನೋಡಲು ‘ಅಲ್ಲಮ' ಅಡ್ಡಿ ಇಲ್ಲ. 

- ಆರ್‌ ಕೇಶವಮೂರ್ತಿ, ಕನ್ನಡಪ್ರಭ

Follow Us:
Download App:
  • android
  • ios