Asianet Suvarna News Asianet Suvarna News

ಜನಾಂಗೀಯವಾದ ಎಲ್ಲೆಡೆ ಇದೆ ಎಂಬುದೇ ಸತ್ಯ

ತರುಣ್‌ ವಿಜಯ್‌ ಬಳಸಿದ ‘ನಾವು' ಎಂಬ ಪದದ ಮಹತ್ವವನ್ನು ನಾವು ಸರಿಯಾಗಿ ಗ್ರಹಿಸಬೇಕಿದೆ. ಅದರಲ್ಲಿ ಆಫ್ರಿಕನ್ನರಿಗೆ ಒಂದು ಸ್ಪಷ್ಟಸಂದೇಶವಿದೆ. ಅದೆಂದರೆ; ದಕ್ಷಿಣದ ಸುಸಂಸ್ಕೃತರಲ್ಲದ ಜನರೊಂದಿಗೆ ಆರ್ಯಾವರ್ತದ ಹೆಗ್ಗಳಿಕೆಯ ನಾವು ಬದುಕುತ್ತಿದ್ದೇವೆ ಎಂದರೆ, ನಿಮ್ಮೊಂದಿಗೂ ಬದುಕಬಲ್ಲೆವು ಎಂಬುದು!

Nera Matu by TJS George

ನಮ್ಮೊಳಗಿನ ಜನಾಂಗೀಯ ದ್ವೇಷವನ್ನು ನಾವೇಕೆ ಒಪ್ಪಿ​ಕೊಳ್ಳುತ್ತಿಲ್ಲ? ಜನಾಂಗೀಯ ವಾದ ಎಂಬು​ದು ಎಲ್ಲಾ ಸಮಾಜಗಳಿಗೂ ಅಂಟಿದ ಪಿಡುಗು. ಅಮೆ​ರಿಕ ಪಬ್‌ನಲ್ಲಿ ಭಾರತೀಯ ಟೆಕ್ಕಿ​ಯನ್ನು ಹತ್ಯೆ ಮಾ​ಡಿ​​ದರೆ, ಆಸ್ಪ್ರೇಲಿ​ಯಾ​​ದಲ್ಲಿ ಭಾರ​ತೀಯ ಮಹಿಳೆ​ಯೊ​ಬ್ಬ​ರನ್ನು ಇರಿದು ಕೊಂದರೆ ಅವು ಜನಾಂಗೀಯ ದ್ವೇಷ​ದ ಕೃತ್ಯಗಳು ಎಂದು ನಾವು ಹೇಳುತ್ತೇವೆ. ಅದೇ ರೀತಿ ನಾವು ದಾಳಿ ಮಾಡು​ವ​ವರೂ, ಆಫ್ರಿಕ​ನ್ನ​ರು ದಾಳಿ​ಗೊಳ​ಗಾ​ಗು​ವ​ವ​ರೂ ಆಗಿ​ದ್ದಾಗ ಇದೇ ಮಾತ​ನ್ನು ನಾವು ಏಕೆ ನಮ್ಮ ಬಗ್ಗೆ ಒಪ್ಪಿಕೊಳ್ಳಲ್ಲ?

ಭಾರತದಲ್ಲಿಲ್ಲವೇ ಜನಾಂಗೀಯ ದ್ವೇಷ?
ದೆಹಲಿಯ ಮಾಲ್‌ವೊಂದರಲ್ಲಿ ಆಫ್ರಿಕನ್ನರ ಮೇಲೆ ಅತ್ಯಂತ ಅಮಾನುಷ ದಾಳಿ ನಡೆಯಿತು. ಆ ಘಟನೆ ಕುರಿತು ಸರ್ಕಾರದ ವಕ್ತಾರರು ವಿಷಾದ ವ್ಯಕ್ತಪಡಿಸಿ​ದರು ಮತ್ತು ಅಷ್ಟೇ ಅವಸರವಾಗಿ ಅದೊಂದು ಜನಾಂಗೀಯ ದ್ವೇಷದ ದಾಳಿಯಲ್ಲ ಎಂಬುದನ್ನೂ ಸ್ಪಷ್ಟ​ಪಡಿಸಲು ಮರೆಯಲಿಲ್ಲ. ಜನಾಂಗೀಯ ದ್ವೇಷ​ದ ಕೃತ್ಯ ಅಲ್ಲ ಎನ್ನುವುದಾದರೆ ಆ ಘಟನೆ ಬೇರೇನು? ಭಾರ​ತೀಯರು ಮತ್ತು ಆಫ್ರಿಕನ್ನರ ನಡುವೆ ರೆಸ್ಟೋರೆಂಟ್‌ ಬಿಲ್‌, ಟ್ಯಾಕ್ಸಿ ಬಾಡಿಗೆಯಂತಹ ಚಿಕ್ಕ​ಪುಟ್ಟವಿಷಯಗಳ ಕಾರಣಕ್ಕಾಗಿ ಆರಂಭವಾಗುವ ವಾಗ್ವಾದ, ಜಗಳಗಳು ಭೀಕರ ಹಲ್ಲೆಯಲ್ಲಿ ಅಂತ್ಯ ಕಾಣು​ತ್ತವೆ ಮತ್ತು ಆ ಘರ್ಷಣೆಯಲ್ಲಿ ಪರಸ್ಪರರ ನಡು​ವೆ ಬಳಕೆಯಾಗುವ ಭಾಷೆ, ಹಲ್ಲೆಯ ತೀವ್ರ​ತೆ​ ಅಂತಿಮವಾಗಿ ಅದೊಂದು ಜನಾಂಗೀಯ ದ್ವೇಷದ ಕೃತ್ಯವೇ ಅಲ್ಲವೆ ಎಂಬುದನ್ನು ನಿರ್ಧರಿಸುತ್ತವೆ.

ಇತ್ತೀಚಿನ ವರ್ಷಗಳಲ್ಲಿ ಪುನರಾವರ್ತನೆ​ಯಾಗು​ತ್ತಿ​ರುವ ಹಲವು ಘಟನೆಗಳು ಇದೇ ಸಂದೇಶವನ್ನು ನೀಡು​ತ್ತಿವೆ. ಅದರಲ್ಲೂ ಬೆಂಗಳೂರಿನ ರಸ್ತೆಬದಿಯ ಅಂಗಡಿಯೊಂದರಲ್ಲಿ ಸಿಗರೇಟು ಕೊಳ್ಳಲು ಹೋದ ಆಫ್ರಿಕನ್‌ ವಿದ್ಯಾರ್ಥಿಯ ಮೇಲೆ ನಡೆದ ಹಲ್ಲೆ ಬಹಳ ವಿಚಿತ್ರ ಪ್ರಕರಣ. ಈ ವಿದ್ಯಾರ್ಥಿ ಕೇಳಿದಾಗ ಅಂಗಡಿ​ಯಾತ ತನ್ನ ಬಳಿ ಸಿಗರೇಟು ಖಾಲಿಯಾಗಿದೆ ಎಂದ. ಆದರೆ, ಆತನ ಹಿಂದೆಯೇ ಬಂದ ಸ್ಥಳೀಯನೊಬ್ಬನಿಗೆ ಕೇಳಿದ ಬ್ರಾಂಡಿನ ಸಿಗರೇಟು ನೀಡಿದ್ದ. ಇದನ್ನು ಆ ವಿದ್ಯಾರ್ಥಿ ಪ್ರಶ್ನಿಸಿದ. ತನಗೆ ಏಕೆ ಸಿಗರೇಟು ಇಲ್ಲ ಎಂದು ಕೇಳಿದ್ದೇ ಆತನ ಪ್ರಮಾದವಾಯಿತು. ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಯಿತು. ದುರಂತವೆಂದರೆ ಈ ಘಟನೆಯನ್ನು ಕಣ್ಣಾರೆ ಕಂಡರೂ ಪೊಲೀಸರು ಮೂಕಪ್ರೇಕ್ಷಕರಾಗಿ ನಿಂತದ್ದು!
ಇಂತಹ ಘಟನೆಗಳಿಂದ ವಿಮುಖರಾಗುವುದರಿಂದ ಯಾರಿಗೂ ಲಾಭವಾಗದು. ಸಮಾಜ ವಿಜ್ಞಾನಿಗಳ ಭಾಷೆಯಲ್ಲಿ ಹೇಳುವುದಾದರೆ, ಜನಾಂಗೀಯ ದ್ವೇಷ ಎಂಬುದು ಎಲ್ಲಾ ಮನುಷ್ಯರ ಮತ್ತು ಸಮಾಜಗಳ ಮನಸ್ಸಿನ ಆಳದಲ್ಲಿ ಅರಿವಿಲ್ಲದಂತೆ ಸುಪ್ತವಾಗಿ ಅಡಗಿ​ರು​ತ್ತದೆ. ಮಾನವ ಇತಿಹಾಸದುದ್ದಕ್ಕೂ ಜನಾಂಗೀಯ​ವಾದ ಎಂಬುದು ಹಾಸುಹೊಕ್ಕಾಗಿದೆ ಎಂದು ಎಪಿಜೆ ಅಬ್ದುಲ್‌ ಕಲಾಂ ಅವರು ತಮ್ಮ ‘ಇಂಡಿಯಾ 2020' ಕೃತಿ​ಯಲ್ಲಿ 1998ರಲ್ಲೇ ಹೇಳಿದ್ದರು. ಅವರಿಗೂ ಹಿಂದೆ​ಯೇ ಕವಯಿತ್ರಿ ಸರೋಜಿನಿ ನಾಯ್ದು ಅವರು ಜನಾಂಗೀಯ ಮತ್ತು ಧಾರ್ಮಿಕ ಸಹಜ ಸಂಘರ್ಷ​ಗಳ ಬಗ್ಗೆ ಪ್ರಸ್ತಾಪಿಸಿ, ಕೇವಲ ಶಿಕ್ಷಣ ಮಾತ್ರ ಮನುಷ್ಯ​ನನ್ನು ಇಂತಹ ವಿಕೃತಿಗಳಿಂದ ಪಾರುಮಾಡಬಲ್ಲದು ಎಂದಿದ್ದರು. ಅದೊಂದು ಆಶಾವಾದವಾಗಿತ್ತು. ಆದರೆ, ಇತಿಹಾಸವನ್ನು ಗಮನಿಸಿದರೆ, ಅತ್ಯಂತ ಹೇಯ ಜನಾಂಗೀಯ ದ್ವೇಷದ ಹಲ್ಲೆಗಳು ನಡೆದಿ​​ರು​ವು​ದು ಶಿಕ್ಷಿತ ವರ್ಗದವರಿಂದಲೇ ಎಂಬುದು ಅರಿವಿಗೆ ಬರದಿ​ರದು. ಅದು ಯುರೋಪಿನ ವಸಾಹತು​ಶಾಹಿ​ಗ​ಳಿಂದ ಆದ ಅಮೆರಿಕ ಮೂಲ ನಿವಾಸಿಗಳ ಸಾಮೂಹಿಕ ಹತ್ಯೆ ಇರಬಹುದು, ಬ್ರಿಟಿಷ್‌ ವಲಸಿ​ಗ​ರಿಂದ ನಡೆದ ಆಸ್ಪ್ರೇಲಿಯಾದ ಬುಡಕಟ್ಟುಗಳ ನಾಶವಿ​ರ​ಬಹುದು, ಜರ್ಮನಿಯ ನಾಝಿಗಳು ನಡೆಸಿದ ಯಹೂದಿ​ಗಳ ಸರ್ವನಾಶವಿರಬಹುದು ಎಲ್ಲೆಡೆ ಶಿಕ್ಷಿತರ ಮನದೊಳಗಿನ ವಿಕೃತಿಯ ದರ್ಶನ​ವಾಗ​ದಿ​ರದು. ಶಿಕ್ಷಣ ಎಂಬುದು ಜನಾಂಗೀಯ ದ್ವೇಷವನ್ನು ಕೆಲಮಟ್ಟಿಗೆ ತಗ್ಗಿಸಬಹುದೇ ವಿನಾ ಅದನ್ನು ಸಂಪೂರ್ಣ ತೊಡೆದುಹಾಕುವುದು ಸಾಧ್ಯವಿಲ್ಲ. ಏಕೆಂದರೆ, ಜನಾಂಗೀಯ ಪೂರ್ವಗ್ರಹಗಳು ಮನುಷ್ಯನ ಸುಪ್ತ ಮನಸ್ಸಿನ ಒಳಗೆ ಬೇರುಬಿಟ್ಟಿವೆ.

ಇದೀಗ ನಾವು ಭಾರತೀಯರು ಈ ಪಿಡುಗನ್ನು ಸರಿ​ಯಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡ​ಬೇಕಿದೆ. ಏಕೆಂದರೆ, ನಮ್ಮನ್ನು ಹೊರತುಪಡಿಸಿ ಏಷ್ಯಾದ ಇನ್ನಾವುದೇ ದೇಶದಲ್ಲೂ ವರ್ಣಾಧಾರಿತ ಇಂತಹ ಪೂರ್ವಗ್ರಹಪೀಡಿತ ಪಿಡುಗು ಇಲ್ಲ. ದೇಶದಲ್ಲಿ ವೈವಾಹಿಕ ಜಾಹೀರಾತುಗಳು ಮತ್ತು ಚರ್ಮ​ಕಾಂತಿಯ ಫೇರ್‌ನೆಸ್‌ ಕ್ರೀಮ್‌ಗಳ ಬಗೆಗೆ ಇರುವ ಅತಿಯಾದ ವ್ಯಾಮೋಹವನ್ನು ಗಮನಿಸಿದರೆ ಯಾರಿ​ಗಾದರೂ ನಿಜವಾಗಿಯೂ ನಾವೆಷ್ಟುವರ್ಣ​ಭೇ​ದ ಭಾವನೆ ಹೊಂದಿದ್ದೇವೆ ಎಂಬುದು ಅರ್ಥ​ವಾ​​ಗ​​ದಿ​ರದು. ಭಾರತೀಯರ ಮೈಬಣ್ಣದ ವ್ಯಾಮೋಹದ ಮೂಲವಿರುವುದು ವೇದಗಳ ಕಾಲಕ್ಕೂ ಹಿಂದಿನಿಂದ ರೂಪುಗೊಂಡ ನಮ್ಮ ಮನಸ್ಥಿತಿ​ಯಲ್ಲಿ ಎಂಬುದು ತಜ್ಞರ ವಾದ. ‘ಪುರಾತನ ಭಾರತ​ದಲ್ಲಿ ಶೂದ್ರರು' ಎಂಬ ಕೃತಿ ರಚಿಸಿರುವ ಆರ್‌ ಎಸ್‌ ಶರ್ಮಾ ಅವರು ಋುಗ್ವೇದದ ಕೆಲವು ಅಧ್ಯಾಯಗಳನ್ನ ಉದ್ಧರಿಸಿ ‘ಪುರಾತನ ಸಮಾಜದ ಅಳಿದುಳಿದ ಜನರು ಆರ್ಯ ಸಮಾಜದ ನಾಲ್ಕನೇ ವರ್ಣದವರಾಗಿ ಗುರು​ತಿ​ಸಲ್ಪಟ್ಟರು' ಎನ್ನುತ್ತಾರೆ. ಹಾಗೇ, ‘ಆದರೆ, ಎಲ್ಲ ಕರಿಯ ವರ್ಣದವರೂ ಶೂದ್ರರಾಗಿ ಗುರುತಿ​ಸ​ಲ್ಪ​​ಟ್ಟರು ಎಂದು ಸಾಮಾನ್ಯೀಕರಿಸಲಾಗದು. ಏಕೆಂದರೆ ಕೆಲವು ಕಡೆ ಕರಿಯ ಋುಷಿಮುನಿಗಳ ಕುರಿತ ಪ್ರಸ್ತಾಪ​ಗಳನ್ನೂ ಕಾಣುತ್ತೇವೆ' ಎಂದೂ ಹೇಳಿದ್ದಾರೆ.

ಆ ದೃಷ್ಟಿಯಲ್ಲಿ ಬಹುಶಃ ಸಾಮಾನ್ಯವಾಗಿ ಉತ್ತರಭಾರತೀಯರು ದಕ್ಷಿಣ ಭಾರತೀಯರನ್ನು ಮದರಾಸಿಗಳು ಎನ್ನುವುದರ ಮೂಲ ಇರುವುದು ಈ ಋುಗ್ವೇದದಲ್ಲೇ ಇರಬೇಕು. ಅಂತಹ ಒಂದು ಬೌದ್ಧಿಕ ಟೊಳ್ಳುತನದಿಂದಲೇ ಆಮ್‌ ಆದ್ಮಿ ಪಾರ್ಟಿ​ಯ ಆಸ್ಥಾನ ಕವಿ ಕುಮಾರ್‌ ವಿಶ್ವಾಸ್‌, ಜೆಡಿಯುನ ಪಳೆಯುಳಿಕೆಯಂತಹ ನಾಯಕ ಶರದ್‌ ಯಾದವ್‌ ಅವರು ದಕ್ಷಿಣದ ಕಪ್ಪುಸುಂದರಿಯರ ಬಗ್ಗೆ ಮಾತನಾ​ಡಿ​ರಬಹುದು. ದೀಪಿಕಾ ಪಡುಕೋಣೆ ಉತ್ತರ ಭಾರತ ಮೂಲದವಳು ಎಂದು ಅವರು ತೀರ್ಮಾನಕ್ಕೆ ಬಂದಂತಿದೆ.

ಅಸಲಿ ಧೋರಣೆ ಬದಲಾಗದು
ಅವರಿಗೆ ಹೋಲಿಸಿದರೆ ತರುಣ್‌ ವಿಜಯ್‌ ಹೆಚ್ಚು ವಿಶ್ವಪ್ರಜ್ಞೆಯ ರಾಜಕಾರಣಿ! ಆದರೂ ಪಾಪ, ಅವರಿಗೂ ದಕ್ಷಿಣ ಭಾರತೀಯರೊಂದಿಗೆ ನಾವು ಹೇಗೆ ಬದುಕುತ್ತಿದ್ದೇವೆ ನೋಡಿ ಎಂದು ಸಹಜವಾಗೇ ಅನಿಸಿಬಿಟ್ಟಿದೆ. ಅವರ ಸ್ವಪ್ರತಿಷ್ಠೆಯ ಮೂಲವಿರು​ವು​ದು ಆರ್‌ಎಸ್‌ಎಸ್‌ ಲೇಪಿತ ರಕ್ತ ತುಂಬಿದ ಅವರ ನರ​ನಾಡಿ​ಗಳಲ್ಲಿ; ಹಾಗಾಗಿ ವಿಂಧ್ಯ ಪರ್ವತ​ಶ್ರೇಣಿಯೇ ಅವರಿಗೆ ಸಾಂಸ್ಕೃತಿಕ ಗಡಿ. ಮತಗಳ ಮುಲಾಜಿ​ಗಾಗಿ ರಾಜಕಾರಣಿಗಳ ಭಾಷೆ ಬದ​ಲಾ​ಗ​ಬ​​ಹುದು. ಆದರೆ, ಅವರ ನರನಾಡಿಗಳಲ್ಲಿ ತುಂಬಿ​ರುವ ಅಸಲೀ ಧೋರಣೆ ಬದಲಾಗದು ಎಂಬುದಕ್ಕೆ ತರುಣ್‌ ವಿಜಯ್‌ ಇತ್ತೀಚಿನ ಉದಾಹರಣೆಯಷ್ಟೇ.

ಹಾಗಾಗಿ, ಅವರು ಬಳಸಿದ ‘ನಾವು' ಎಂಬ ಪದದ ಮಹತ್ವವನ್ನು ನಾವು ಸರಿಯಾಗಿ ಗ್ರಹಿಸಬೇಕಿದೆ. ಅದರಲ್ಲಿ ಆಫ್ರಿಕನ್ನರಿಗೆ ಒಂದು ಸ್ಪಷ್ಟಸಂದೇಶವಿದೆ. ಅದೆಂದರೆ; ದಕ್ಷಿಣದ ಸುಸಂಸ್ಕೃತರಲ್ಲದ ಜನರೊಂದಿಗೆ ಆರ್ಯಾವರ್ತದ ಹೆಗ್ಗಳಿಕೆಯ ನಾವು ಬದುಕುತ್ತಿದ್ದೇವೆ ಎಂದರೆ, ನಿಮ್ಮೊಂದಿಗೂ ಬದುಕಬಲ್ಲೆವು ಎಂಬುದು! ಹಾಗಾಗಿ, ನಾವು ಒಂದನ್ನು ಅರ್ಥಮಾಡಿಕೊಳ್ಳಲೇ​ಬೇಕಿದೆ. ಉತ್ತರ ಉತ್ತರವೇ, ದಕ್ಷಿಣ ದಕ್ಷಿಣವೇ. ಅವುಗಳೆರಡೂ ಎಂದೆಂದಿಗೂ ಒಂದಾಗಲಾರವು!