Asianet Suvarna News Asianet Suvarna News

ಸ್ವಾಭಿಮಾನ ಅಹಂ ಆದಾಗ...ರಾಜಕಾರಣಿಗಳಿಗೆ ಸ್ಪಷ್ಟಪಾಠ

Editorial

ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ​ಯಲ್ಲಿ ಕಾಂಗ್ರೆಸ್‌ ಗೆದ್ದು ಬಿಜೆಪಿ ಸೋತಿದೆ. ಜಾತಿ ಲೆಕ್ಕಾಚಾರ, ಅಧಿಕಾರ, ಹಣ ಹಂಚಿಕೆ, ಅಭಿವೃದ್ಧಿಯ ಅಜೆಂಡಾ ಇತ್ಯಾದಿ ಎಲ್ಲ ಸಂಗತಿಗಳಿಗಿಂತ ಇಂತಹ ಚುನಾವಣೆಯಲ್ಲಿ ಮುಖ್ಯವಾಗುವುದು ಈ ಚುನಾವಣೆಗೆ ಕಾರಣವಾದ ಅಂಶವನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎಂಬುದು. ಉಪ ಚುನಾವಣೆ ನಡೆದ ಎರಡೂ ಕ್ಷೇತ್ರಗಳ ಫಲಿತಾಂಶವನ್ನು ಗಮನಿಸಿದರೆ ಇದು ಇನ್ನಷ್ಟುಸ್ಪಷ್ಟವಾಗುತ್ತದೆ. ಗುಂಡ್ಲು​ಪೇಟೆಯಲ್ಲಿ ಸಚಿವ ಮಹದೇವಪ್ರಸಾದ್‌ ಅವರ ನಿಧನದಿಂದಾಗಿ ಚುನಾವಣೆ ನಡೆ​ಯುವುದು ಅನಿವಾರ್ಯವಾಗಿತ್ತು. ಅವರ ಪತ್ನಿಯೇ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರಿಂದ ಅನುಕಂಪದ ಅಲೆಯೂ ಅವರ ಪರ ಕೆಲಸ ಮಾಡಿರಬಹುದು. ಮಾಡಿದ್ದರೆ ಅದು ನಿರೀಕ್ಷಿತವೇ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ನಾಯಕ ಯಡಿಯೂರಪ್ಪ ಅವರಿಗೆ ಅತ್ಯಂತ ಪ್ರತಿಷ್ಠೆಯ ಕಣವಾಗಿದ್ದುದು ನಂಜನಗೂಡು ಕ್ಷೇತ್ರ. ಇಲ್ಲಿ ಯಾವ ವಿಶೇಷ ಕಾರಣವೂ ಇಲ್ಲದೆ, ಕೇವಲ ಈ ಕ್ಷೇತ್ರದ ಶಾಸಕರು ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಶಾಸನಸಭೆಗೆ ರಾಜಿನಾಮೆ ನೀಡಿದ್ದರಿಂದ ಚುನಾವಣೆ ಎದುರಾಗಿತ್ತು. ತಮ್ಮನ್ನು ಸಚಿವ ಸಂಪುಟದಿಂದ ಕಿತ್ತುಹಾಕಿದ್ದರಿಂದ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯುಂಟಾಗಿದೆ ಎಂಬ ಕಾರಣ ನೀಡಿ ಶ್ರೀನಿವಾಸ ಪ್ರಸಾದ್‌ ಅವರು ಪಕ್ಷ ಬಿಟ್ಟು, ಬಿಜೆಪಿ ಸೇರಿ, ಉಪ ಚುನಾವಣೆಗೆ ಕಾರಣವಾಗಿದ್ದರು. ಅವರ ವೈಯಕ್ತಿಕ ಸ್ವಾಭಿಮಾನದ ಪ್ರಶ್ನೆ ಈ ಕ್ಷೇತ್ರದಲ್ಲಿ ಅನಗತ್ಯ ಚುನಾವಣೆಗೆ ಕಾರಣವಾಗುವುದರೊಂದಿಗೆ ಅಹಂಕಾರವಾಗಿ ಮಾರ್ಪಟ್ಟಿತ್ತು. ಅಂತಹ ಅಹಂಕಾರವನ್ನು ಜನರು ಒಪ್ಪಿಕೊಳ್ಳುವುದಿಲ್ಲ ಎಂಬುದನ್ನು ಫಲಿತಾಂಶದಲ್ಲೇ ತೋರಿಸಿ​ದ್ದಾರೆ. ಇದು ಶ್ರೀನಿವಾಸ ಪ್ರಸಾದ್‌ ಅಥವಾ ಬಿಜೆಪಿ​ಗಷ್ಟೇ ಅಲ್ಲ, ಎಲ್ಲ ಪಕ್ಷಗಳಿಗೂ ಭವಿಷ್ಯದ ಪಾಠವಾಗಬೇಕಿದೆ.

ಪ್ರಜಾಪ್ರಭುತ್ವದಲ್ಲಿ ಚುನಾವಣೆಗೆ ವಿಶಿಷ್ಟಮೌಲ್ಯ​ವಿ​ದೆ ಮತ್ತು ಇದನ್ನು ನಡೆಸಲು ಜನರ ಹಣ​ವನ್ನೇ ವ್ಯಯಿಸಬೇಕಾಗುತ್ತದೆ. ಐದು ವರ್ಷ​ಕ್ಕೊ​ಮ್ಮೆ ನಡೆಯುವ ಸಾರ್ವತ್ರಿಕ ಚುನಾ​ವಣೆಯ ನಂತರ ಮಧ್ಯಂತರ ಅವಧಿ​ಗ​ಳಲ್ಲಿ ನಡೆಯುವ ಉಪ ಚುನಾವಣೆ​ಗಳು ಅನಿವಾರ್ಯ ಸಂದರ್ಭದಲ್ಲಷ್ಟೇ ನಡೆಯಬೇಕು. ಜನಪ್ರತಿನಿಧಿಗಳು ವೈಯಕ್ತಿಕ ಕಾರಣಕ್ಕೆ ತಮ್ಮ ಕ್ಷೇತ್ರದ ಮೇಲೆ ಚುನಾವಣೆಗಳನ್ನು ಹೇರಿದರೆ, ಅದು ಅವರ ಮಟ್ಟಿಗೆ ಸ್ವಾಭಿಮಾನದ ಪ್ರಶ್ನೆಯಾದರೂ, ಪ್ರಜಾಪ್ರಭುತ್ವದ ಕಣ್ಣಿನಲ್ಲಿ ಅಹಂಕಾರವಾಗುತ್ತದೆ. ಶ್ರೀನಿವಾಸ ಪ್ರಸಾದ್‌ ಅವರು ನಂಜನಗೂಡಿನಲ್ಲಿ ಉಪ ಚುನಾವಣೆಯನ್ನು ತಂದು ಏನನ್ನೂ ಸಾಧಿಸಿದಂತಾಗಲಿಲ್ಲ. ಸಾರ್ವತ್ರಿಕ ಚುನಾವಣೆ ಒಂದು ವರ್ಷ ಮಾತ್ರ ಉಳಿದಿರುವಾಗ ಇಲ್ಲಿಗೆ ಹೊಸತಾಗಿ ಒಬ್ಬ ಶಾಸಕ ಆಯ್ಕೆಯಾದರೆ ಅವರಿಂದ ಕ್ಷೇತ್ರಕ್ಕೆ ಮಹಾನ್‌ ಉಪಕಾರವೇನೂ ಆಗು​ವು​ದಿಲ್ಲ ಎಂಬುದು ಜನರಿಗೆ ಚೆನ್ನಾಗಿಯೇ ಗೊತ್ತಿತ್ತು. ಇದನ್ನು ಅರ್ಥ ಮಾಡಿ​ಕೊಳ್ಳು​ವ​ಲ್ಲಿ ಬಿಜೆಪಿ ಕೂಡ ಎಡವಿದೆ. ಕೇವಲ ಜಾತಿ ಸಮೀಕರಣವನ್ನೇ ನೆಚ್ಚಿಕೊಂಡು ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಈ ಫಲಿತಾಂಶ ತೋರಿಸಿಕೊಟ್ಟಿದೆ.

ಈ ಚುನಾವಣೆಯ ಫಲಿತಾಂಶ ಭವಿಷ್ಯದ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯೇ ಅಥವಾ ಯಾವ ಪಕ್ಷದಲ್ಲಿ ಯಾವ ನಾಯಕರ ಸ್ಥಾನಮಾನಗಳ ಮೇಲೆ ಇದು ಹೇಗೆ ಪರಿಣಾಮ ಬೀರಲಿದೆ ಎಂಬುದು ಬೇರೆಯದೇ ವಿಷಯ ಮತ್ತು ಆ ಬಗ್ಗೆ ಹಲವು ದೃಷ್ಟಿಕೋನಗಳಲ್ಲಿ ವಿಶ್ಲೇಷಣೆಗಳು ಕೇಳಿಬರಬಹುದು. ಆದರೆ, ಎಲ್ಲ ರಾಜಕೀಯ ನಾಯಕರಿಗೂ ಈ ಚುನಾವಣೆಯಿಂದ ಸ್ಪಷ್ಟವಾದ ಸಂದೇಶವೊಂದು ರವಾನೆಯಾಗಿದೆ- ‘ಚುನಾವಣೆಯನ್ನಾಗಲೀ, ಮತದಾರರನ್ನಾಗಲೀ ಅಥವಾ ಪ್ರಜಾಪ್ರಭುತ್ವವನ್ನಾಗಲೀ ನಿಮ್ಮ ಅತಿಯಾದ ಸ್ವಾಭಿಮಾನಕ್ಕೆ ದಾಳ ಮಾಡಿಕೊಳ್ಳಬೇಡಿ. ನಿಮಗೆ ಮತ ಹಾಕಿ ಗೆಲ್ಲಿಸುವವರು ನಿಮ್ಮನ್ನು ಶಾಸನಸಭೆಯಲ್ಲಿ ತಮ್ಮ ಪ್ರತಿನಿಧಿಯನ್ನಾಗಿ ನೋಡಲು ಬಯಸುತ್ತಾರೆಯೇ ಹೊರತು ತಮ್ಮನ್ನು ನೆಪವಾಗಿಟ್ಟುಕೊಂಡು ವೈಯಕ್ತಿಕ ಪ್ರತಿಷ್ಠೆ ಮೆರೆಯು​ವುದನ್ನು ನೋಡಲು ಬಯಸುವುದಿಲ್ಲ.' ಚುನಾವಣೆಯಲ್ಲಿ ಗೆಲ್ಲುವುದು ಅಥವಾ ಸೋಲುವುದು ಬೇರೆ ವಿಷಯ. ಪ್ರಜಾಪ್ರಭುತ್ವದಲ್ಲಿ ಚುನಾವಣಾ ವ್ಯವಸ್ಥೆ ಗೌರವಿಸುವುದನ್ನು ಎಲ್ಲ ರಾಜಕಾರಣಿಗಳೂ ಮೊದಲು ಮೈಗೂಡಿಸಿಕೊಳ್ಳಬೇಕಿದೆ.