Asianet Suvarna News Asianet Suvarna News

ಶ್ರವಣಬೆಳಗೊಳ ಮಾರ್ಗವಾಗಿ ಬೆಂಗಳೂರು-ಹಾಸನ ನೇರ ರೈಲು ನಾಳೆಯಿಂದ ಶುರು

ಈಡೇರಿದ 2 ದಶಕದ ಬೇಡಿಕೆ | ಈ ಹಿಂದೆ ಮೈಸೂರು ಮೂಲಕ ರೈಲು ಸಂಚಾರ | ಇನ್ನು ಮುಂದೆ ಬೆಂಗಳೂರು- ಕುಣಿಗಲ್‌ ಮೂಲಕ ಓಡಾಟ

bengaluru to hassan via shravanabelgola train starts from march 25th

ಬೆಂಗಳೂರು(ಮಾ. 25): ದಶಕಗಳ ಕಾಯುವಿಕೆ ಕೊನೆಗೂ ಮುಗಿದಿದ್ದು ಬೆಂಗಳೂರು ಮತ್ತು ಹಾಸನ ನಡುವಿನ ನೇರ ರೈಲು ಮಾರ್ಗ ಪೂರ್ಣಗೊಂಡು ಉದ್ಘಾಟನೆಗೆ ಸಜ್ಜಾಗಿದೆ. ಭಾನುವಾರ ಈ ಮಾರ್ಗ ಲೋಕಾರ್ಪಣೆಗೊಳ್ಳಲಿದೆ. ಎರಡು ದಶಕಗಳ ಹಿಂದೆ ಎಚ್‌.ಡಿ. ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಮಂಜೂರಾಗಿದ್ದ ಈ 110 ಕಿ.ಮೀ. ಉದ್ದದ ರೈಲು ಮಾರ್ಗ ದೇಶದ ನಾಲ್ಕು ಪ್ರಧಾನಮಂತ್ರಿಗಳನ್ನು ಕಂಡ ಬಳಿಕ ಉದ್ಘಾಟನೆಗೆ ಸಿದ್ಧವಾಗಿದೆ. 

ದೇಶದಲ್ಲೇ ದೀರ್ಘಾವಧಿಯ ಕಾಮಗಾರಿ ನಡೆದ ರೈಲು ಮಾರ್ಗಗಳ ಸಾಲಿಗೆ ಈ ರೈಲು ಮಾರ್ಗವೂ ಸೇರಿದೆ. ನೆಲಮಂಗಲ ಮತ್ತು ಶ್ರವಣಬೆಳಗೊಳ ನಡುವೆ ನಿರ್ಮಾಣವಾಗಿದೆ. ಭೂಸ್ವಾಧೀನ, ಹಣಕಾಸಿನ ಕೊರತೆ ಹೀಗೆ ಹತ್ತು ಹಲವು ಸಮಸ್ಯೆಗಳಿಂದಾಗಿ ಕೆಲ ವರ್ಷಗಳ ಕಾಲ ಸಂಪೂರ್ಣ ಸ್ಥಗಿತಗೊಂಡಿದ್ದ ಕಾಮಗಾರಿ ಕೊನೆಗೂ ಚಾಲನೆ ಗೊಂಡು ಪೂರ್ಣಗೊಂಡಿದೆ. 

ಮೈಸೂರಿನಿಂದ ಸುತ್ತಿ ಬಳಸಿ ಮಾಡಬೇಕಿದ್ದ ಬೆಂಗಳೂರು-ಮಂಗಳೂರು ಪ್ರಯಾಣವನ್ನು ಈ ಮಾರ್ಗ ಕೊನೆಯಾಗಿಸಲಿದೆ. ಅಲ್ಲದೆ, ಪ್ರಯಾಣದ ಅವಧಿಯಲ್ಲೂ ಸುಮಾರು 4 ಗಂಟೆ ಉಳಿತಾಯ ವಾಗಲಿದೆ. ಈ ಹೊಸ ಮಾರ್ಗವು ಬೆಂಗಳೂರು ಹಾಸನ ನಡುವಿನ ಪ್ರಯಾಣವನ್ನೂ 50 ಕಿ.ಮೀ.ಗಳಷ್ಟು ಕಡಿಮೆಗೊಳಿಸಲಿದೆ. ಈ ಮೊದಲು ಬೆಂಗಳೂರು-ಮಂಗಳೂರು (ಮೈಸೂರು ಮೂಲಕ) 447 ಕಿ.ಮೀ. ಸಂಚರಿಸಬೇಕಾಗಿತ್ತು. ಈ ರೈಲು ಮಾರ್ಗದಿಂದಾಗಿ ಇನ್ನು ಮುಂದೆ ಬೆಂಗಳೂರು-ಮಂಗಳೂರು ನಡುವಿನ ಪ್ರಯಾಣದ ದೂರ 340 ಕಿಮೀಗೆ ಇಳಿಯಲಿದೆ. 

ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ: ಬೆಂಗಳೂರು (ಚಿಕ್ಕಬಾಣಾವರ) ಮತ್ತು ನೆಲಮಂಗಲ ನಡುವಿನ 14 ಕಿ.ಮೀ. ನೆಲಮಂಗಲ-ಶ್ರವಣಬೆಳಗೊಳ ನಡುವಿನ 94 ಹಾಗೂ ಶ್ರವಣಬೆಳಗೊಳ-ಹಾಸನ ನಡುವಿನ 42 ಕಿ.ಮೀ. ಮಾರ್ಗವು ಪ್ರಯಾಣಕ್ಕೆ ಸುರಕ್ಷಿತವೆಂಬ ಪ್ರಮಾಣ ಪತ್ರವನ್ನು ಕಳೆದ ತಿಂಗಳಷ್ಟೇ ಪಡೆಯಲಾಗಿದೆ. ಈ ಮಾರ್ಗದಲ್ಲಿ ಗಂಟೆಗೆ 80 ಕಿ.ಮೀ. ವೇಗದಲ್ಲಿ ರೈಲಿನ ಸಂಚಾರಕ್ಕೆ ರೈಲ್ವೇ ಸುರಕ್ಷತಾ ಮಂಡಳಿ ಅನುಮತಿ ನೀಡಿದೆ. 

ಪುಣ್ಯಕ್ಷೇತ್ರಗಳ ಪಯಣ: ಬೆಂಗಳೂರು-ಮಂಗಳೂರು ನಡುವಣ ರೈಲ್ವೇ ಪ್ರಯಾಣ ಪುಣ್ಯಕ್ಷೇತ್ರಗಳ ಪಯಣವೂ ಆಗಲಿದೆ. ಯಡಿಯೂರು ಸಿದ್ದಲಿಂಗೇಶ್ವರ ದಿಂದ ಆರಂಭಗೊಳ್ಳುವ ಪುಣ್ಯಕ್ಷೇತ್ರಗಳ ಸಾಲು ಆದಿಚುಂಚನಗಿರಿ, ಶ್ರವಣಬೆಳಗೊಳ, ಸುಬ್ರಹ್ಮಣ್ಯ, ಧರ್ಮಸ್ಥಳಗಳನ್ನು ಜೋಡಿಸಲಿದೆ. 

ಹಾಸನ-ಬೆಂಗಳೂರು ಇಂಟರ್‌ ಸಿಟಿ: ಹೊಸ ರೈಲು ಮಾರ್ಗವು ಹಾಸನ ಮತ್ತು ಬೆಂಗಳೂರು ನಡುವಿನ ಪ್ರಯಾಣವನ್ನು ಇನ್ನಷ್ಟು ಸುಲಲಿತವಾಗಿಸಿದೆ. ಹಾಸನ ಮತ್ತು ಬೆಂಗಳೂರು ನಡುವೆ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ರೈಲು ಕೂಡಾ ಭಾನುವಾರದಿಂದಲೇ ಆರಂಭವಾಗಲಿದ್ದು ನಿತ್ಯ ಬೆಳಗ್ಗೆ 6 ಗಂಟೆಗೆ ಹಾಸನದಿಂದ ಹೊರಟ ರೈಲು ಯಶವಂತಪುರವನ್ನು 9.30ಕ್ಕೆ ತಲುಪಲಿದೆ. ಯಶವಂತಪುರದಿಂದ ಸಂಜೆ 6 ಕ್ಕೆ ಹೊರಡುವ ರೈಲು ರಾತ್ರಿ 9.30ಕ್ಕೆ ಹಾಸನ ಸೇರಲಿದೆ. ಚಿಕ್ಕಬಾಣಾವರ, ಕುಣಿಗಲ್‌, ಯಡಿಯೂರು, ಬಾಲಗಂಗಾಧರ ನಗರ (ಆದಿಚುಂಚನಗಿರಿ ಕಾಲೇಜು/ಬೆಳ್ಳೂರು ಕ್ರಾಸ್‌), ಶ್ರವಣಬೆಳಗೊಳ, ಚೆನ್ನರಾಯಪಟ್ಟಣಗಳಲ್ಲಿ ನಿಲುಗಡೆ ಇರಲಿದೆ. ಉದ್ಘಾಟನೆ ದಿನ ಭಾನುವಾರ ಮಾತ್ರ ಬೆಳಗ್ಗೆ 11 ಗಂಟೆಗೆ ರೈಲು ಸಂಚಾರ ಆರಂಭಿಸಲಿದೆ.

110 ಕಿ.ಮೀ. ಉದ್ದದ ಮಾರ್ಗ 4 ಗಂಟೆ ಸಮಯ ಉಳಿತಾಯ 50 ಕಿ.ಮೀ. ಪ್ರಯಾಣ ಕಡಿತ ಹಾಸನ- ಬೆಂಗಳೂರು ನಡುವೆ ಸದ್ಯದಲ್ಲೇ ಸಂಚಾರ ಆರಂಭಿಸಲಿರುವ ಮೂರು ನೂತನ ರೈಲುಗಳಿಗೆ ನನ್ನ ಹೆಸರಿಡಬೇಡಿ. ಬೆಂಗಳೂರು ಮತ್ತು ಹಾಸನ ನಡುವೆ ಮಾ.26ರಿಂದ ಮೂರು ನೂತನ ರೈಲುಗಳ ಸಂಚಾರ ಆರಂಭವಾಗಲಿದೆ. ಈ ಮೂರು ರೈಲುಗಳ ಪೈಕಿ ಒಂದಕ್ಕೆ ಗೊಮ್ಮಟೇಶ್ವರ, ಮತ್ತೊಂದಕ್ಕೆ ಹೇಮಾವತಿ ಹಾಗೂ ಇನ್ನೊಂದಕ್ಕೆ ಕಾಲಭೈರವೇಶ್ವರ ಎಂದು ಹೆಸರಿಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪತ್ರ ಬರೆದಿದ್ದೇನೆ.
- ಎಚ್‌.ಡಿ. ದೇವೇಗೌಡ, ಮಾಜಿ ಪ್ರಧಾನಿ

ಕನ್ನಡಪ್ರಭ ವಾರ್ತೆ
epaper.kannadaprabha.in

Follow Us:
Download App:
  • android
  • ios